HomeLatest Newsಕಾಮಗಾರಿ ಟೆಂಡರ್ ಕೊಡುವುದಕ್ಕೂ ಮಂತ್ರಿಗಳಿಗೂ ಏನು ಸಂಬಂಧ? ಸಚಿವ ಭೈರತಿ ಸುರೇಶ್ ಕಿಡಿ

ಕಾಮಗಾರಿ ಟೆಂಡರ್ ಕೊಡುವುದಕ್ಕೂ ಮಂತ್ರಿಗಳಿಗೂ ಏನು ಸಂಬಂಧ? ಸಚಿವ ಭೈರತಿ ಸುರೇಶ್ ಕಿಡಿ

ಬೆಂಗಳೂರು: ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯವಾಗುವಂತೆ ಪ್ಯಾಕೇಜ್ ಟೆಂಡರ್ ಮಾಡಲಾಗುತ್ತಿದೆ ಎಂಬ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಆರೋಪಕ್ಕೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಭೈರತಿ ಸುರೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಭೈರತಿ ಸುರೇಶ್, ಗುತ್ತಿಗೆದಾರರು ತಮ್ಮ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳನ್ನು ನೀಡದೇ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾಮಗಾರಿಯ ಗುತ್ತಿಗೆಯನ್ನು ನೀಡುವ ವಿಚಾರದಲ್ಲಿ ಸಚಿವರ ಹಸ್ತಕ್ಷೇಪ ಇರುವುದಿಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತದೆ ಎಂದು ಹೇಳಿದರು.

ಟೆಂಡರ್ ಕೊಡುವುದಕ್ಕೂ ಮಂತ್ರಿಗಳಿಗೂ ಏನು ಸಂಬಂಧ? ಪಾರದರ್ಶಕ ಕಾಯ್ದೆಯಡಿಯೇ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಅರ್ಹ ಗುತ್ತಿಗೆದಾರರನ್ನು ಅಧಿಕಾರಿಗಳ ತಂಡ ಅಂತಿಮಗೊಳಿಸುತ್ತದೆ ಎಂಬುದು ಸೇರಿದಂತೆ ಇಡೀ ಟೆಂಡರ್ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಗುತ್ತಿಗೆದಾರರ ಸಂಘದ ಮಂಜುನಾಥ್ ಅವರಿಗೂ ತಿಳಿದಿದೆ. ಆದಾಗ್ಯೂ, ಪದೇಪದೆ, ಮಂತ್ರಿಗಳ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಿನಂಪ್ರತಿ ಇದೇ ರೀತಿ ಆರೋಪಗಳನ್ನು ಮಾಡುತ್ತಾ ಬಂದರೆ ಇಲಾಖೆಗಳನ್ನು ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಸಚಿವರು, ಈ ಪ್ರಕ್ರಿಯೆಗಳಲ್ಲಿ ಯಾರು ಭಾಗಿಯಾಗಿದ್ದಾರೆ ಮತ್ತು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದಾದರೂ ಸಾಕ್ಷ್ಯಾಧಾರಗಳಿದ್ದರೆ ಒದಗಿಸಲಿ ಎಂದು ಹೇಳಿದರು.

ವಿನಾಕಾರಣ ಆರೋಪಗಳನ್ನು ಮಾಡುವ ಮೂಲಕ ಗಾಳಿಯಲ್ಲಿ ಗುಂಡುಹಾರಿಸಿ ಸಾರ್ವಜನಿಕ ಜೀವನದಲ್ಲಿರುವವರ ತೇಜೋವಧೆ ಮಾಡುವುದು ಬೇಡ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವ ಬಗ್ಗೆ ಮಂಜುನಾಥ್ ಅವರು ನನ್ನ ಬಳಿ ಮನವಿ ಮಾಡಿದ್ದರು. ಹಣಕಾಸು ಇಲಾಖೆ ಅನುಮೋದನೆ ಪಡೆದು ಹಂತಹಂತವಾಗಿ ಬಾಕಿ ಇರುವ 200 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಮಾಡುವಂತೆ ರಾಜ್ಯ ಗುತ್ತಿಗೆದಾರರ ಸಂಘಟನೆ ಮತ್ತೆ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ರಾಜ್ಯ ಸರ್ಕಾರಕ್ಕೆ ಡೆಡ್ ಲೈನ್ ನೀಡಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಗುತ್ತಿಗೆದಾರರ ಸಂಘಟನೆ ಅಧ್ಯಕ್ಷ, ಆರ್.ಮಂಜುನಾಥ್, ರಾಜ್ಯ ಸರ್ಕಾರ 37,370 ಕೋಟಿ ರೂ.ಬಾಕಿ ಉಳಿಸಿಕೊಂಡಿದೆ. ಕಳೆದ ಎರಡು ವರ್ಷಗಳಿಂದ ಗುತ್ತಿಗೆದಾರರು ನರಕಯಾತನೆ ಅನುಭವಿಸುತ್ತಿದ್ದೇವೆ. ಮಾರ್ಚ್ 5 ರೊಳಗೆ ಸರ್ಕಾರ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಗಡುವು ನೀಡಿದ್ದಾರೆ.

ಅಷ್ಟರಲ್ಲಿ ಬಿಲ್ ಹಣ ಬಿಡುಗಡೆ ಮಾಡಿದರೆ ಒಳಿತು. ಇಲ್ಲವಾದಲ್ಲಿ ರಾಜ್ಯಾದ್ಯಂತ ಎಲ್ಲಾ ಇಲಾಖೆಗಳ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದೇ ವೇಳೆ ಆಯಾಅ ಇಲಾಖೆಯಿಂದ ಬಾಕಿ ಇರುವ ಹಣದ ಬಗ್ಗೆ ವಿವರಿಸಿದ್ದಾರೆ.

ಇಲಾಖೆಯ ಹೆಸರು – ಬಾಕಿ ಮೊತ್ತ (ಕೋಟಿ ರೂ.ಗಳಲ್ಲಿ)
ಲೋಕೋಪಯೋಗಿ ಇಲಾಖೆ (PWD) – 13,000
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) – 3,800
ಸಣ್ಣ ನೀರಾವರಿ ಇಲಾಖೆ – 3,000
ನಗರಾಭಿವೃದ್ದಿ ಇಲಾಖೆ – 2,000
ವಸತಿ ಮತ್ತು ವಕ್ಫ್ ಇಲಾಖೆ – 2,600
ಕಾರ್ಮಿಕ ಇಲಾಖೆ – 2,000
ಗಣಿ ಮತ್ತು ಭೂವಿಜ್ಞಾನ (GBA) – 2,600
ಒಟ್ಟು 37,370 ಕೋಟಿ ರೂಪಾಯಿ ಹಣ ಬಾಕಿ ಇದೆ ಎಂದಿದ್ದಾರೆ.

10 ಮಹಾನಗರ ಪಾಲಿಕೆಗಳಲ್ಲಿ ಮತ್ತು ಕಾರ್ಮಿಕ ಇಲಾಖೆಯಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯವಾಗುವಂತೆ ಪ್ಯಾಕೇಜ್ ಟೆಂಡರ್ ಮಾಡಲಾಗುತ್ತಿದೆ. ಆರ್‌ಟಿ ನಗರ ಮತ್ತು ರಾಜಾಜಿನಗರದ ಖಾಸಗಿ ಕಚೇರಿಗಳಲ್ಲಿ ಕುಳಿತು ಟೆಂಡರ್ ಹಂಚಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular