ಬೆಂಗಳೂರು: ರಾಜ್ಯ ಸರ್ಕಾರ ಮಹಿಳಾ ನೌಕರರಿಗೆ ಋತುಚಕ್ರ ರಜೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕಡ್ಡಾಯ ಋತುಚಕ್ರ ರಜೆ ನೀಡುವಂತೆ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಮಹಿಳಾ ನೌಕರರಿಗೆ ಕಡ್ಡಾಯವಾಗಿ ಋತುಚಕ್ರ ರಜೆ ನೀಡಲು ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಋತುಚಕ್ರ ರಜೆ ವಿಚಾರದಲ್ಲಿ ಇರುವ ಷರತ್ತುಗಳ ಬಗ್ಗೆ ಇಲ್ಲಿದೆ ಮಾಹಿತಿ.
- ಮಹಿಳಾ ನೌಕರರು ಋತುಚಕ್ರ ರಜೆಗಳನ್ನು ಆಯಾ ತಿಂಗಳಲ್ಲಿಯೇ ಪಡೆದುಕೊಳ್ಳಬೇಕು. ಹಿಂದಿನ ತಿಂಗಳ ಋತುಚಕ್ರ ರಜೆಯನ್ನು ಮುಂದಿನ ತಿಂಗಳಿಗೆ ವಿಸ್ತರಿಸಲು ಅವಕಾಶವಿಲ್ಲ.
- ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆಯನು ಪಡೆಯಲು ಮಹಿಳಾ ನೌಕರರು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸಬೇಕಿಲ್ಲ.
- ಋತುಚಕ್ರ ಹೊಂದಿರುವ 18ರಿಂದ 52 ವರ್ಷ ವಯಸ್ಸಿನ ಮಹಿಳಾ ಸರ್ಕಾರಿ ನೌಕರರು ಈ ರಜೆಯನ್ನು ಪಡೆಯಲು ಅರ್ಹರಿರುತ್ತಾರೆ.
- ಸಾಂದರ್ಭಿಕ ರಜೆ ಮಂಜೂರು ಮಾಡಲು ಸಕ್ಷಮವಾದ ಪ್ರಾಧಿಕಾರಿಯು ಋತುಚಕ್ರ ರಜೆಯನ್ನು ಮಂಜೂರು ಮಾಡಬಹುದು.
- ಈ ರಜೆಯನ್ನು ಹಾಜರಾತಿ ಅಥವಾ ರಜೆ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸತಕ್ಕದ್ದು.
- ಋತುಚಕ್ರ ರಜೆಯನ್ನು ಬೇರೆ ಯಾವುದೇ ರಜೆಯೊಂದಿಗೆ ಸಂಯೋಜಿಸತಕ್ಕದ್ದಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ನೀಡಲಾಗುವ ವೇತನ ಸಹಿತ ರಜೆಯನ್ನು ಕರ್ನಾಟಕ ಸರ್ಕಾರವು ಇತ್ತೀಚೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ಮಹಿಳಾ ನೌಕರರಿಗೆ ಪ್ರತಿ ತಿಂಗಳು ಒಂದು ದಿನದ ರಜೆಯನ್ನು ಘೋಷಿಸಿದೆ. ಆದರೆ ಈ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ ಮತ್ತು ಪುರುಷ ನೌಕರರು ವಿರೋಧಿಸಿದ್ದಾರೆ. ಆದರೂ ಶಿಕ್ಷಕಿಯರಿಗೆ ಪ್ರತಿ ತಿಂಗಳು ಒಂದು ದಿನದ ರಜೆಯನ್ನು ನೀಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ವಿದ್ಯಾರ್ಥಿನಿಯರು ಕೂಡ ಋತುಚಕ್ರ ರಜೆ ನೀಡುವಂತೆ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.

