ಬೆಂಗಳೂರು: ಇಂಧನ ಇಲಾಖೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯನವರ ಹಸ್ತಕ್ಷೇಪಕ್ಕೆ ಬೇಸತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ನಿರ್ಧರಿಸಿ ರಾಜೀನಾಮೆಯನ್ನೂ ಕೊಟ್ಟಿದ್ದರು ಎಂಬ ವಿಚಾರ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಇದೇ ವಿಚಾರ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಸ್ವತಃ ಈ ಬಗ್ಗೆ ಇಂಧನ ಸಚಿವರೇ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದರು.
ಇಂಧನ ಇಲಾಖೆಯಲ್ಲಿ ಸಚಿವ ಕೆ.ಜೆ.ಜಾರ್ಜ್ ಅವರ ಗಮನಕ್ಕೂ ತರದೇ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ, ಕೆಲ ಅಧಿಕಾರಿಗಳನ್ನು ವರ್ಗಾವಣೆಯಾಗಲು ಕಾರಣರಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಯತೀಂದ್ರ ಸಿದ್ದರಾಮಯ್ಯ ಅವರ ನಡೆಗೆ ಬೇಸತ್ತ ಸಚಿವ ಜಾರ್ಜ್, ರಾಜೀನಾಮೆಗೆ ಮುಂದಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ಪರವನ್ನೂ ನೀಡಿದ್ದರು ಎನ್ನಲಾಗಿದೆ.
ಇದೇ ವಿಚಾರ ಇಂದು ವಿಧಾನಸಭೆಯಲ್ಲಿ ಚರ್ಚೆಯಾಯಿತು. ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ಸದನದಲ್ಲಿ ವಿಷಯ ಪ್ರಸ್ತಾಪಿಸಿದ್ದು, ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಇಂಧನ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದರಿಂದ ಬೇಸರಗೊಂಡು ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಿದ್ದರು ಎಂಬ ಮಾತು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಈ ಬಗ್ಗೆ ಇಂಧನ ಸಚಿವರು ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದರು.
ಈ ವೇಳೆ ಪ್ರತಿಕ್ರಿಯೆ ನೀಡಿದ ಕೆ.ಜೆ.ಜಾರ್ಜ್, ನಾನು ರಾಜೀನಾಮೆ ನೀಡಿಲ್ಲ, ಇದೆಲ್ಲವೂ ಸತ್ಯಕ್ಕೆ ದೂರವಾದ ಸುದ್ದಿ. ಮಾಧ್ಯಮಗಳ ಸೃಷ್ಠಿ. ನನಗೆ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅಂತಹ ಯಾವುದೇ ಸಮಸ್ಯೆಗಳೂ ಇಲಾಖೆಯಲ್ಲಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು. ಮಾಧ್ಯಮದವರಿಗೆ ಗಂಟೆಗೊಂದು ನ್ಯೂಸ್ ಬೇಕು. ಈ ಹಿಂದೆ ದಿನಕ್ಕೆ ಮೂರು ನ್ಯೂಸ್ ಗಳು ಮಾತ್ರ ಇದ್ದವು. ಆದರೀಗ ನ್ಯೂಸ್ ಚಾನಲ್ ನಲ್ಲಿ ಗಂಟೆಗೊಂದು ನ್ಯೂಸ್ ಇರುತ್ತದೆ. ಹಾಗಾಗಿ ಅವರಿಗೆ ಸುದ್ದಿಬೇಕು. ಬ್ರೇಕಿಂಗ್ ನ್ಯೂಸ್ ಆಗಬೇಕು. ಹಾಗಾಗಿ ಅವರೇ ಇಂತಹ ಸುದ್ದಿ ಸೃಷ್ಟಿಸುತ್ತಿದ್ದಾರೆ ಎಂದು ಮಾಧ್ಯಮಗಳ ಮೇಲೆ ಆರೋಪ ಮಾಡಿದರು. ನಾನು ಯಾವುದೇ ರಾಜೀನಾಮೆ ನೀಡಿಲ್ಲ. ಇಂಧನ ಇಲಾಖೆಯಲ್ಲಿ ಯಾವ ಹಸ್ತಕ್ಷೇಪವೂ ಆಗಿಲ್ಲ ಎಂದು ತಿಳಿಸಿದರು.

