ಮಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಧಮ್ಕಿ ಹಾಕಿ ಬೆದರಿಕೆಯೊಡ್ಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಚಿಕ್ಕಬಳ್ಳಪೌರ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.
ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ್ದ ರಾಜೀವ್ ಗೌಡನನ್ನು ಕೇರಳದ ಗಡಿ ಭಾಗದಲ್ಲಿ ಸೋಮವಾರ ಪೊಲೀಸರು ಬಂಧಿಸಿದ್ದರು. ರಾಜೀವ್ ಗೌಡಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ ಮಂಗಳೂರು ಮೂಲದ ಉದ್ಯಮಿಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಮೂಲದ ಮೈಕೆಲ್ ಜೊಸೆಫ್ ರೆಗೋ ಬಂಧಿತ ಆರೋಪಿ. ಪಚ್ಚೆನಾಡಿ ಬಳಿ ಮೆಕೆಲ್ ಗೆ ಸೇರಿದ ಜೆ.ಕೆ.ಫಾರ್ಮ್ ಹೌಸ್ ನಲ್ಲಿ ರಾಜೀವ್ ಗೌಡ ತಲೆಮರೆಸಿಕೊಂಡಿದ್ದ. ಈ ಬಗ್ಗೆ ಮಾಹಿತಿ ಪಡೆದ ಚಿಕ್ಕಬಳ್ಳಾಪುರ ಪೊಲೀಸರು ಪಚ್ಚೆನಾಡಿತ್ತ ತೆರಳಿದ್ದಾರೆ. ಪೊಲೀಸರು ತನ್ನ ಬಂಧನಕ್ಕೆ ಬರುತ್ತಿದ್ದಾರೆ ಎಂಬುದನ್ನು ಅರಿತ ರಾಜೀವ್ ಗೌಡ ತನ್ನ ಕಾರನ್ನು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದ ಬಳಿ ಬಿಟ್ಟು ಮೈಕೆಲ್ ಕಾರಿನಲ್ಲಿ ಕೇರಳಕ್ಕೆ ಪರಾರಿಯಾಗಿದ್ದಾರೆ.
ಮೈಕೆಲ್ ಕಾರಿನ ಜಾಡು ಹಿಡಿದ ಪೊಲೀಸರು ಕೇರಳಕ್ಕೆ ತೆರಳಿದ್ದು, ಗಡಿ ಭಾಗದಲ್ಲಿ ರಾಜೀವ್ ಗೌಡನನ್ನು ಬಂಧಿಸಿದ್ದಾರೆ. ಇದೇ ವೇಳೆ ರಾಜೀವ್ ಗೌಡಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ ಉದ್ಯಮಿ ಮೈಕೆನನ್ನೂ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಅಕ್ರಮವಾಗಿ ಅಳವಡಿಸಿದ್ದ ಬ್ಯಾನರ್ ತೆರವು ಮಾಡಿದ್ದಕ್ಕೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಕರೆ ಮಾಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ನಿಂದಿಸಿ ಜೀವಬೆದರಿಕೆ ಹಾಕಿದ್ದರು. ಈ ಕುರಿತ ಆಡಿಯೋ ಕೂಡ ವೈರಲ್ ಆಗಿತ್ತು. ರಾಜೀವ್ ಗೌಡ ವಿರುದ್ಧ ಪೌರಾಯುಕ್ತೆ ಅಮೃತಾಗೌಡ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ಶಿಡ್ಲಘಟ್ಟ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜೀವ್ ಗೌಡನನ್ನು ಬಂಧಿಸಲಾಗಿದೆ.

