ಕರ್ನಾಟಕದ ಬೆಳಗಾವಿ ಗಡಿಯಲ್ಲಿ ನಡೆದ 400 ಕೋಟಿ ರೂಪಾಯಿಗಳ ಬೃಹತ್ ದರೋಡೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹೌದು. ಕರ್ನಾಟಕದ ಬೆಳಗಾವಿ ಗಡಿಭಾಗದ ಚೋರ್ಲಾ ಘಾಟ್ ಅರಣ್ಯ ಪ್ರದೇಶದಲ್ಲಿ ನಡೆದಿದೆಯೆನ್ನಲಾದ ಈ 400 ಕೋಟಿ ರೂಪಾಯಿ ದರೋಡೆ ಪ್ರಕರಣವು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ.
ಈ ಹಣ ಗುಜರಾತ್ನ ಒಬ್ಬ ಪ್ರಭಾವಿ ರಾಜಕಾರಣಿಗೆ ಸೇರಿದ್ದು ಎಂಬ ಸ್ಫೋಟಕ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ. ಇದನ್ನು ತೆಲಂಗಾಣದ ‘ಬಾಲಾಜಿ ಟ್ರಸ್ಟ್’ ಮೂಲಕ ಕಪ್ಪು ಹಣದಿಂದ ಬಿಳಿ ಹಣವಾಗಿ (Money Laundering) ಪರಿವರ್ತಿಸಲು ಸ್ಕೆಚ್ ಹಾಕಲಾಗಿತ್ತು ಎನ್ನಲಾಗಿದೆ. ದೂರುದಾರ ಸಂದೀಪ್ ಪಾಟೀಲ್ ನೀಡಿದ ವಿಡಿಯೋ ಹೇಳಿಕೆಯ ಪ್ರಕಾರ, ಇದು ಕೇವಲ 400 ಕೋಟಿ ರೂಪಾಯಿ ಅಲ್ಲ, ಸುಮಾರು 1,000 ಕೋಟಿ ರೂಪಾಯಿ ಮೊತ್ತದ ಹಗರಣವಾಗಿದೆ.
ಈ ಪ್ರಕರಣವು ಈಗ ಮೂರು ರಾಜ್ಯಗಳ ಪೊಲೀಸರ ಸಮನ್ವಯದೊಂದಿಗೆ ನಿರ್ಣಾಯಕ ಹಂತಕ್ಕೆ ತಲುಪಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಆದೇಶದ ಮೇರೆಗೆ ರಂಗಕ್ಕಿಳಿದ ವಿಶೇಷ ತನಿಖಾ ದಳದ (SIT) ಅಧಿಕಾರಿಗಳಿಗೆ ಸಹಕರಿಸಲು ಕರ್ನಾಟಕ ಮತ್ತು ಗೋವಾ ಪೊಲೀಸರು ಕೈಜೋಡಿಸಿದ್ದಾರೆ. ನಾಸಿಕ್ ಮೂಲದ ಸಂದೀಪ್ ಪಾಟೀಲ್ ಎಂಬ ರಿಯಲ್ ಎಸ್ಟೇಟ್ ಏಜೆಂಟ್ ಜನವರಿ 1 ರಂದು ಪೊಲೀಸರಿಗೆ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
2025 ರ ಅಕ್ಟೋಬರ್ನಲ್ಲಿ ಗೋವಾದಿಂದ ಗುಜರಾತ್ನ ಆಶ್ರಮವೊಂದಕ್ಕೆ ಎರಡು ಕಂಟೈನರ್ಗಳಲ್ಲಿ ಸುಮಾರು 400 ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಸಾಗಿಸುತ್ತಿದ್ದಾಗ, ಚೋರ್ಲಾ ಘಾಟ್ ಬಳಿ ದುಷ್ಕರ್ಮಿಗಳು ಅವುಗಳನ್ನು ದೋಚಿದ್ದರು. ಈ ದರೋಡೆಯ ಬಗ್ಗೆ ಮಾಹಿತಿ ತಿಳಿದಿದೆ ಎಂಬ ನೆಪದಲ್ಲಿ ಕೆಲವರು ತನ್ನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿದ್ದಾರೆ ಎಂದು ಸಂದೀಪ್ ಪಾಟೀಲ್ ಆರೋಪಿಸಿದ್ದಾರೆ.
ಕರ್ನಾಟಕ ಪೊಲೀಸರ ಎಂಟ್ರಿ
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಮಹಾರಾಷ್ಟ್ರ ಸರ್ಕಾರ ಎಸ್ಐಟಿ ರಚಿಸಿದೆ. ಮಹಾರಾಷ್ಟ್ರ ಎಸ್ಐಟಿ ಮುಖ್ಯಸ್ಥ ಆದಿತ್ಯ ಮಿರ್ಕೆಲ್ಕರ್ ಅವರ ಮನವಿಯ ಮೇರೆಗೆ, ಬೆಳಗಾವಿ ಎಸ್ಪಿ ಕೆ. ರಾಮರಾಜನ್ ಅವರು ವಿಶೇಷ ತಂಡವೊಂದನ್ನು ನಾಸಿಕ್ಗೆ ಕಳುಹಿಸಿದ್ದಾರೆ. ಪ್ರಸ್ತುತ ಈ ಪ್ರಕರಣವು ಕೇವಲ ದೂರುದಾರರ ಹೇಳಿಕೆಯ ಮೇಲೆ ಆಧಾರಿತವಾಗಿದೆ ಎಂದು ಬೆಳಗಾವಿ ಎಸ್ಪಿ ಕೆ. ರಾಮರಾಜನ್ ತಿಳಿಸಿದ್ದಾರೆ. ಕರ್ನಾಟಕದ ಗೃಹ ಸಚಿವ ಜಿ. ಪರಮೇಶ್ವರ್ ಕೂಡ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದು, ದರೋಡೆಗೊಳಗಾದ ಕಂಟೈನರ್ಗಳ ಪತ್ತೆಗಾಗಿ ಮಹಾರಾಷ್ಟ್ರ ಸರ್ಕಾರದಿಂದ ಹೆಚ್ಚಿನ ಮಾಹಿತಿ ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಐವರು ಆರೋಪಿಗಳ ಬಂಧನ
ಈ ಪ್ರಕರಣದಲ್ಲಿ ಜಯೇಶ್ ಕದಮ್, ವಿಶಾಲ್ ನಾಯ್ಡು, ಸುನೀಲ್ ಧುಮಾಲ್, ವಿರಾಟ್ ಗಾಂಧಿ ಮತ್ತು ಜನಾರ್ದನ್ ಧೈಗುಡೆ ಎಂಬ ಐವರು ಆರೋಪಿಗಳನ್ನು ಮಹಾರಾಷ್ಟ್ರ ಎಸ್ಐಟಿ ಬಂಧಿಸಿದೆ. ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ದೂರುದಾರ ಸಂದೀಪ್ ಪಾಟೀಲ್ ಅವರು ಪೊಲೀಸರಿಗೆ ಪ್ರಮುಖ ಕಾಲ್ ರೆಕಾರ್ಡಿಂಗ್ ಮತ್ತು ವಿಡಿಯೋ ಕಾಲ್ ಪುರಾವೆಗಳನ್ನು ಒದಗಿಸಿದ್ದಾರೆ. ದರೋಡೆಯಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಬಿಲ್ಡರ್ ಕಿಶೋರ್ ಸಾವ್ಲಾ ಸೇಠ್ ಅವರು ತನ್ನನ್ನು ಎರಡು ತಿಂಗಳ ಕಾಲ ಬಂಧಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಪಾಟೀಲ್ ಆರೋಪಿಸಿದ್ದಾರೆ.
ರಾಜಕೀಯ ಮತ್ತು ಚುನಾವಣಾ ನಂಟು
ಬೆಳಗಾವಿ ಪೊಲೀಸ್ ಮೂಲಗಳು ನೀಡಿದ ಮಾಹಿತಿಯ ಪ್ರಕಾರ, ಈ ಬೃಹತ್ ಹಣವನ್ನು ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಸಾಗಿಸಲಾಗುತ್ತಿತ್ತು ಎಂಬ ಸಂಶಯ ವ್ಯಕ್ತವಾಗಿದೆ. ರಾಜಕೀಯ ವಿರೋಧಿ ಬಣವೊಂದು, ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಒಬ್ಬ ಧರ್ಮಗುರುವಿನ ಸಹಾಯದಿಂದ ಈ ಕಂಟೈನರ್ಗಳನ್ನು ತಡೆದು ಹಣವನ್ನು ಲೂಟಿ ಮಾಡಿರುವ ಸಾಧ್ಯತೆಯಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಹಣವು ಥಾಣೆಯ ಪ್ರಮುಖ ಬಿಲ್ಡರ್ ಒಬ್ಬರಿಗೆ ಸೇರಿದ್ದು, ಅದನ್ನು ಕಪ್ಪು ಹಣದಿಂದ ಬಿಳಿ ಹಣವಾಗಿ (White money) ಪರಿವರ್ತಿಸಲು ಗುಜರಾತ್ಗೆ ಸಾಗಿಸುತ್ತಿದ್ದಾಗ ಈ ದರೋಡೆ ನಡೆದಿದೆ ಎನ್ನಲಾಗಿದೆ.

