ತೆಲಂಗಾಣ : ಶಾಲೆಯಲ್ಲಿ ಪಾಠ ಬಿಟ್ಟು ಇನ್ಸ್ಟಾಗ್ರಾಮ್ ರೀಲ್ಸ್ ಪೋಸ್ಟ್ ಮಾಡುತ್ತಿದ್ದ ಶಿಕ್ಷಕಿಗೆ ಸರ್ಕಾರ ಶಾಕ್ ನೀಡಿದ್ದು, ಶಿಕ್ಷಕಿ ಕಣ್ಣೀರಿಟ್ಟಿದ್ದಾರೆ. ಹೌದು. ಪಾಠ ಮಾಡದೇ ಖಾಸಗಿ ಸಂಸ್ಥೆಗಳ ಪರ ಪ್ರಚಾರ ಮಾಡುತ್ತಾ ರೀಲ್ಸ್ ಮಾಡುತ್ತಿದ್ದ ಆರೋಪದ ಮೇರೆಗೆ ಶಿಕ್ಷಕಿಯೊಬ್ಬರನ್ನು ಅಮಾನತು ಮಾಡಲಾಗಿದೆ. ಶಿಕ್ಷಕಿ ಸೋಶಿಯಲ್ ಮೀಡಿಯಾದಲ್ಲಿ ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪರ ವಿರೋಧ ಚರ್ಚೆಗೆ ಕಾರಣವಾಗಿದೆ.
ಖಮ್ಮಂನ ಮಾಮಿಳ್ಳಗೂಡೆಂ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಗೌತಮಿ ಅವರನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಮಾನತು (Suspend) ಮಾಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ವ್ಯಾಪಾರ ಸಂಸ್ಥೆಗಳ ಪ್ರಚಾರ (Promotions) ಹಾಗೂ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡುತ್ತಿದ್ದ ಶಿಕ್ಷಕಿಯ ವಿರುದ್ಧ ಕೊನೆಗೂ ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ಶಾಲೆಯ ಅಡ್ಮಿಷನ್ ಪ್ರಚಾರ ಮತ್ತು ಶಾಲೆಯ ಸಮಯದಲ್ಲಿ ರೀಲ್ಸ್ ಮಾಡುತ್ತಿದ್ದ ಬಗ್ಗೆ ಈ ಹಿಂದೆ ಎಚ್ಚರಿಕೆ ನೀಡಿದ್ದರೂ ವರ್ತನೆ ಬದಲಿಸಿಕೊಳ್ಳದ ಕಾರಣ, ಡಿಇಒ (DEO) ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಇಂಗ್ಲಿಷ್ ಶಿಕ್ಷಕಿ ಗೌತಮಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವುದು, ಖಾಸಗಿ ಮತ್ತು ಕಾರ್ಪೊರೇಟ್ ಶಿಕ್ಷಣ ಸಂಸ್ಥೆಗಳಿಗೆ ಪ್ರಚಾರ ನೀಡುವುದು ಹಾಗೂ ಶಾಲಾ ಸಮಯದಲ್ಲಿ ರೀಲ್ಸ್ ಮಾಡುತ್ತಿರುವುದನ್ನು ಗಮನಿಸಿದ ಹಿರಿಯ ಅಧಿಕಾರಿಗಳು ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರೂ ಶಿಕ್ಷಕಿ ತನ್ನ ಹಾದಿಯನ್ನು ಬದಲಿಸಿಕೊಳ್ಳದ ಕಾರಣ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಚೈತನ್ಯ ಜೈನಿ ತಿಳಿಸಿದ್ದಾರೆ.
ಅಸಲಿಗೆ ನಡೆದಿದ್ದೇನು ? ಖಮ್ಮಂನ ಮಾಮಿಳ್ಳಗೂಡೆಂ ಪ್ರೌಢಶಾಲೆಯಲ್ಲಿ ಸ್ಕೂಲ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಭೂಕ್ಯಾ ಗೌತಮಿ, ಕಳೆದ ಕೆಲವು ತಿಂಗಳುಗಳಿಂದ ನಗರದ ಖಾಸಗಿ ಶಾಲೆಯ ಪ್ರವೇಶಾತಿಗೆ ಸಂಬಂಧಿಸಿದ ಪ್ರಚಾರ ಮಾಡುತ್ತಾ, ತನ್ನ ಸರ್ಕಾರಿ ಶಾಲೆಯ ಕರ್ತವ್ಯಗಳನ್ನು ನಿರ್ಲಕ್ಷಿಸುತ್ತಿದ್ದರು. ಅಲ್ಲದೆ, ಶಾಲಾ ವೇಳೆಯಲ್ಲಿ ರೀಲ್ಸ್ ಮಾಡುವ ಮೂಲಕ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಹಿಂದೆ ಹಲವು ಬಾರಿ ಎಚ್ಚರಿಸಲಾಗಿತ್ತು. ಆದರೂ ಬದಲಾಗದ ಕಾರಣ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಸರ್ಕಾರಿ ಶಿಕ್ಷಕರು ಕೇವಲ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಬೇಕು, ಕರ್ತವ್ಯ ಲೋಪ ಎಸಗಿದರೆ ಕಠಿಣ ಕ್ರಮ ಅನಿವಾರ್ಯ ಎಂದು ಡಿಇಒ ಎಚ್ಚರಿಸಿದ್ದಾರೆ.
ಪ್ಲೀಸ್.. ಒಂದು ಅವಕಾಶ ಕೊಡಿ.: ಅಮಾನತು ಆದೇಶದ ಬಗ್ಗೆ ಶಿಕ್ಷಕಿ ಗೌತಮಿ ಪ್ರತಿಕ್ರಿಯಿಸಿದ್ದಾರೆ. ತಾವು ತಿಳಿಯದೆ ಈ ತಪ್ಪು ಮಾಡಿದ್ದಾಗಿ ಮತ್ತು ತಮಗೆ ಒಂದು ಅವಕಾಶ ನೀಡಬೇಕೆಂದು ಕೋರಿದ್ದಾರೆ. ಇನ್ನು ಮುಂದೆ ಎಂದಿಗೂ ಹೀಗೆ ಮಾಡುವುದಿಲ್ಲ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

