ದಕ್ಷಿಣ ಭಾರತದ ಖ್ಯಾತ ನಟಿ, ‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್ ತಮ್ಮ ಸುಂದರವಾದ ಮನೆಯನ್ನು ಮೊದಲ ಬಾರಿಗೆ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಏಷ್ಯನ್ ಪೇಂಟ್ಸ್ನ ಜನಪ್ರಿಯ ಸರಣಿ ‘ವೇರ್ ದಿ ಹಾರ್ಟ್ ಈಸ್ – ಸೀಸನ್ 9’ ರ ಭಾಗವಾಗಿ ಕೊಚ್ಚಿಯಲ್ಲಿರುವ ತಮ್ಮ ಮನೆಯ ಒಳಾಂಗಣವನ್ನು ಅವರು ಜಗತ್ತಿಗೆ ತೋರಿಸಿದ್ದಾರೆ. ಸಂಪ್ರದಾಯ ಮತ್ತು ಆಧುನಿಕತೆಯ ಸಮ್ಮಿಲನದಂತಿರುವ ಈ ಮನೆಗೆ ಕೀರ್ತಿ ಸುರೇಶ್ ಅತ್ಯಂತ ಪ್ರೀತಿಯಿಂದ ‘ಹೌಸ್ ಆಫ್ ಫನ್’ ಎಂದು ಹೆಸರಿಟ್ಟಿರುವುದು ವಿಶೇಷ.
ಈ ಮನೆಯ ಪ್ರತಿ ಮೂಲೆಯೂ ಕೀರ್ತಿ ಅವರ ಸರಳ ಮತ್ತು ಕ್ಲಾಸಿ ಅಭಿರುಚಿಯನ್ನು ಪ್ರತಿಬಿಂಬಿಸುತ್ತಿದೆ. ಇಡೀ ಮನೆಯ ಇಂಟೀರಿಯರ್ ವಿನ್ಯಾಸಕ್ಕೆ ತಿಳಿ ಬಣ್ಣಗಳು ಮತ್ತು ಮರದ ಪೀಠೋಪಕರಣಗಳನ್ನು ಬಳಸಲಾಗಿದ್ದು, ಇದು ಮನೆಯ ಒಳಗೆ ಪ್ರಶಾಂತವಾದ ವಾತಾವರಣವನ್ನು ಸೃಷ್ಟಿಸಿದೆ. ನಟಿಯ ಮನೆಯ ಹಜಾರವು ಅತ್ಯಂತ ವಿಶಾಲವಾಗಿದ್ದು, ನೈಸರ್ಗಿಕ ಬೆಳಕು ಮನೆ ತುಂಬುವಂತೆ ವಿನ್ಯಾಸಗೊಳಿಸಲಾಗಿದೆ.
ಮನೆಯ ಪ್ರಮುಖ ಆಕರ್ಷಣೆ ಎಂದರೆ ಅದು ಕೀರ್ತಿ ಸುರೇಶ್ ಅವರ ನೆನಪುಗಳ ಗೋಡೆ (Memory Wall). ಇಲ್ಲಿ ಅವರ ಬಾಲ್ಯದ ಅಪರೂಪದ ಫೋಟೋಗಳ ಜೊತೆಗೆ, ಅವರು ‘ಮಹಾನಟಿ’ ಚಿತ್ರಕ್ಕಾಗಿ ಪಡೆದ ರಾಷ್ಟ್ರ ಪ್ರಶಸ್ತಿಯನ್ನು ಅತ್ಯಂತ ಹೆಮ್ಮೆಯಿಂದ ಅಲಂಕರಿಸಲಾಗಿದೆ. ಅಷ್ಟೇ ಅಲ್ಲದೆ, ಪ್ರಕೃತಿ ಪ್ರೇಮಿಯಾದ ಕೀರ್ತಿ ತಮ್ಮ ಮನೆಯ ಸುತ್ತಲೂ ಸುಂದರವಾದ ಉದ್ಯಾನವನವನ್ನು ನಿರ್ಮಿಸಿಕೊಂಡಿದ್ದಾರೆ. ನಟಿಯ ಮುದ್ದಿನ ನಾಯಿ ‘ನೈಕ್’ ಗಾಗಿಯೇ ಮನೆಯಲ್ಲಿ ಪ್ರತ್ಯೇಕ ಜಾಗವನ್ನು ಮೀಸಲಿಟ್ಟಿರುವುದು ಪ್ರಾಣಿಗಳ ಮೇಲಿರುವ ಅವರ ಪ್ರೀತಿಗೆ ಸಾಕ್ಷಿಯಾಗಿದೆ. ಸದ್ಯ ಕೀರ್ತಿ ಸುರೇಶ್ ಅವರ ಈ ಹೋಮ್ ಟೂರ್ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮನೆಯ ಸೌಂದರ್ಯಕ್ಕೆ ಮನಸೋತಿದ್ದಾರೆ.

