ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ರಸ್ತೆ ಸಂಪೂರ್ಣ ಸಿಗ್ನಲ್ ಫ್ರೀ ಆಗಲಿದ್ದು, ಪ್ರತಿದಿನ ಸಂಚಾರ ನಡೆಸುವ ಸಾವಿರಾರು ವಾಹನ ಸವಾರರಿಗೆ ರಿಲೀಫ್ ಸಿಗಲಿದೆ. ಎನ್‌ಹೆಚ್ಎಐ ಹೊಸ ಕಾಮಗಾರಿಯನ್ನು ಕೈಗೊಳ್ಳಲು ಮುಂದಾಗಿದ್ದು, ಯೋಜನೆ ವಿವರ ಇಲ್ಲಿದೆ.
ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯ ಕೊನೆಯ ಸಿಗ್ನಲ್ ತೆಗೆದು ಹಾಕಲು ಅಂಡರ್ ಪಾಸ್ ಕಾಮಗಾರಿ ಕೈಗೊಳ್ಳಲಾಗುತ್ತದೆ. 6 ಪಥದ 750 ಮೀಟರ್ ಉದ್ದದ ಅಂಡರ್ ಪಾಸ್ ಇದಾಗಿದೆ.
ಎನ್‌ಹೆಚ್‌ಎಐ ಸಾದಹಳ್ಳಿ ಜಂಕ್ಷನ್‌ನಲ್ಲಿ ಈ ಅಂಡರ್ ಪಾಸ್ ನಿರ್ಮಾಣ ಮಾಡಲಿದ್ದು, ಕಾಮಗಾರಿ ಪೂರ್ಣವಾದ ಬಳಿಕ ಏರ್‌ಪೋರ್ಟ್‌ಗೆ ಸಂಚಾರ ಇನ್ನಷ್ಟು ಸುಲಭವಾಗಲಿದೆ. ಸುಮಾರು 2 ವರ್ಷಗಳ ಕಾಲ ಕಾಮಗಾರಿ ನಡೆಯಲಿದ್ದು, ಈ ಸಮಯದಲ್ಲಿ ಸಾದಹಳ್ಳಿ ಜಂಕ್ಷನ್ ಸುತ್ತಮುತ್ತ ವಾಹನ ಮಾರ್ಗ ಬದಲಾವಣೆ ಮಾಡಲಾಗುತ್ತದೆ.
ಯೋಜನೆ ವಿವರ: ಈ ಯೋಜನೆ ಕಾಮಗಾರಿ ಆರಂಭಿಸುವ ಮೊದಲು ಎನ್‌ಹೆಚ್‌ಎಐ ಈಗಿರುವ ರಸ್ತೆಗಳನ್ನು ಅಗಲೀಕರಣ ಮಾಡಲಿದೆ. ವಾಹನಗಳು ಬಂದು ಸೇರುವ ಜಾಗದಲ್ಲಿ ಸಾಕಷ್ಟು ಸ್ಥಳಾವಕಾಶ ಇರುವಂತೆ ಮಾಡಲಿದೆ.
ಸಾದಹಳ್ಳಿ ಜಂಕ್ಷನ್ ಮತ್ತು ಸುತ್ತಮುತ್ತಲು ವಾಸಿಸುವ ಜನರ ಸುಗಮ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಮಾಡಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಈ ಅಂಡರ್ ಪಾಸ್ ನಿರ್ಮಾಣದ ಪ್ರಸ್ತಾವನೆ ಈಗ ಮಾಡಿರುವುದಲ್ಲ.
ದಶಕಗಳ ಹಿಂದೆಯೇ ಎನ್‌ಹೆಚ್‌ಎಐ ಸಾದಹಳ್ಳಿ ಜಂಕ್ಷನ್ ಸಿಗ್ನಲ್ ಫ್ರೀ ಮಾಡಬೇಕು ಎಂದು ಹೇಳಿತ್ತು. ಮೊದಲು ಫ್ಲೈ ಓವರ್ ನಿರ್ಮಾಣ ಮಾಡುವ ಯೋಜನೆ ಇತ್ತು. ಆದರೆ ಈಗ ಅಂಡರ್ ಪಾಸ್ ನಿರ್ಮಾಣ ಮಾಡಲು ಯೋಜಿಸಲಾಗಿದೆ.
2019ರಲ್ಲಿಯೇ ಅಂಡರ್ ಪಾಸ್ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿತ್ತು. ಆದರೆ ವಾಹನಗಳ ಸಂಚಾರದ ದಟ್ಟಣೆ, ವಾಹನ ಮಾರ್ಗ ಬದಲಾವಣೆ ಮಾಡಿದಾಗ ಉಂಟಾಗುವ ದಟ್ಟಣೆ ಎಲ್ಲವನ್ನು ಪರಿಶೀಲನೆ ಮಾಡಿ ಈಗ ಕಾಮಗಾರಿ ಆರಂಭಿಸಲು ತಯಾರಿ ನಡೆದಿದೆ.
ಎನ್‌ಹೆಚ್‌ಎಐ ದೆಹಲಿಯ ಅಧಿಕಾರಿಗಳು ಈ ಯೋಜನೆಗೆ ಈಗಾಗಲೇ ಹಸಿರು ನಿಶಾನೆ ತೋರಿಸಿದ್ದಾರೆ. 35 ಕೋಟಿ ರೂ. ವೆಚ್ಚದಲ್ಲಿ ಯೋಜನೆಯನ್ನು ಕೈಗೊಳ್ಳಲಾಗುತ್ತದೆ. 2026ರ ಫೆಬ್ರವರಿಯಲ್ಲಿ ಈ ಕಾಮಗಾರಿ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈಗಾಗಲೇ ಸಾದಹಳ್ಳಿ ಜಂಕ್ಷನ್‌ನಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲು ಎನ್‌ಹೆಚ್‌ಎಐ ಸಂಚಾರಿ ಪೊಲೀಸರಿಗೆ ಪತ್ರವನ್ನು ಬರೆದಿದೆ. ಅಲ್ಲದೇ ಯೋಜನೆಯ ಟೆಂಡರ್ ಪಡೆದ ಕಂಪನಿಗೆ ಕಾಮಗಾರಿಯ ಮೂಲ ಕೆಲಸಗಳನ್ನು ಕೈಗೊಳ್ಳಲು ಸೂಚನೆ ಕೊಡಲಾಗಿದೆ.
ಈಗ ಇರುವ ಎರಡು ಕಡೆಯ ಸರ್ವೀಸ್ ರಸ್ತೆಯನ್ನು 2 ರಿಂದ 4 ಪಥಕ್ಕೆ ಅಗಲ ಮಾಡಲಾಗುತ್ತದೆ. ಈ ಕೆಲಸವನ್ನು ಅಂಡರ್ ಪಾಸ್ ಟೆಂಡರ್ ಪಡೆದ ಕಂಪನಿಯೇ ಮಾಡಲಿದ್ದು, ಈ ಕಾಮಗಾರಿ ಪೂರ್ಣಗೊಂಡ ಬಳಿಕ ಸಂಚಾರ ಮಾರ್ಗ ಬದಲಾವಣೆ ಮಾಡಲಾಗುತ್ತದೆ.
ಹೆಬ್ಬಾಳ-ಸಾದಹಳ್ಳಿ ಜಂಕ್ಷನ್ 22 ಕಿ.ಮೀ. ಮಾರ್ಗದಲ್ಲಿ ಸದ್ಯ ಯಾವುದೇ ಸಿಗ್ನಲ್‌ಗಳಿಲ್ಲ. ಏರ್‌ಪೋರ್ಟ್ ರಸ್ತೆಯಲ್ಲಿ ಈಗ ಇರುವುದು ಕೇವಲ ಸಾದಹಳ್ಳಿ ಜಂಕ್ಷನ್ ಸಿಗ್ನಲ್. ಈ ರಸ್ತೆಯಲ್ಲಿ ಏರ್‌ಪೋರ್ಟ್ ವಾಹನಗಳು ಮಾತ್ರವಲ್ಲ ಸುತ್ತಮುತ್ತಲ ಹಳ್ಳಿಗಳ ಜನರು ಬಳಕೆ ಮಾಡುತ್ತಾರೆ.
ಬಳ್ಳಾರಿ ರಸ್ತೆ ಅಭಿವೃದ್ಧಿಯ ಭಾಗವಾಗಿ ಎನ್‌ಹೆಚ್‌ಎಐ ಸಾದಹಳ್ಳಿ ಜಂಕ್ಷನ್ ಅನ್ನು ಸಿಗ್ನಲ್ ಫ್ರೀ ಮಾಡಲಿದೆ. ಅಂಡರ್ ಪಾಸ್ ನಿರ್ಮಾಣವಾದರೆ ಏರ್‌ಪೋರ್ಟ್ ವಾಹನಗಳು ಸುಲಭವಾಗಿ ಸಂಚಾರವನ್ನು ನಡೆಸಬಹುದಾಗಿದೆ.
ಯಲಹಂಕ ಏರ್‌ಪೋರ್ಸ್ ಸ್ಟೇಷನ್ ಬಳಿ ಕಟ್ & ಕವರ್ ತಂತ್ರಜ್ಞಾನದ ಮೂಲಕ ಸರ್ವೀಸ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಇದರ ವೆಚ್ಚ ಸುಮಾರು 70 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದೆ. ಅಂಡರ್ ಪಾಸ್, ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಂಡರೆ ವಿಮಾನ ನಿಲ್ದಾಣಕ್ಕೆ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ.

