ಬೆಂಗಳೂರು : ಬೆಂಗಳೂರಲ್ಲಿ ಅತಿವೇಗದಲ್ಲಿ ಲ್ಯಾಂಬೋರ್ಘಿನಿ ಕಾರು ಚಲಾಯಿಸಿ ಚಾಲಕನೋರ್ವ ಹುಚ್ಚಾಟ ಮೆರೆದಿದ್ದು, ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಚಾಲಕನ ವಿರುದ್ಧ ಎಫ್ ಐ ಆರ್ (FIR) ದಾಖಲಿಸಿದ್ದಾರೆ.
ಮೈಸೂರು ರಸ್ತೆಯ ಕೆಂಗೇರಿ ಮೆಟ್ರೋ ನಿಲ್ದಾಣದ ಬಳಿ ಹಸಿರು ಬಣ್ಣದ ಲ್ಯಾಂಬೋರ್ಘಿನಿ ಕಾರು ಅತಿ ವೇಗದಲ್ಲಿ ಅಪಾಯಕಾರಿಯಾಗಿ ಚಲಿಸುತ್ತಿರುವುದು ಕಂಡುಬಂದಿದ್ದು, ಪಾದಚಾರಿಗಳಲ್ಲಿ ಭಯ ಹುಟ್ಟಿಸಿದೆ. ಆನ್‌ಲೈನ್‌ನಲ್ಲಿ ವೀಡಿಯೋ ವೈರಲ್ ಆಗಿದ್ದು, ಬೆಂಗಳೂರು ಪೊಲೀಸರು ಚಾಲಕನ ವಿರುದ್ಧ ಅಜಾಗರೂಕತೆಯ ಚಾಲನೆಗಾಗಿ ಎಫ್‌ಐಆರ್ ದಾಖಲಿಸಿದ್ದಾರೆ.
ಸಾರ್ವಜನಿಕ ಮಾರ್ಗಗಳಲ್ಲಿ ಅತಿವೇಗ ಅಥವಾ ನಿರ್ಲಕ್ಷ್ಯದ ಚಾಲನೆ/ಸವಾರಿ, ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ಮತ್ತು ಭಾರತೀಯ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ವಾಹನ ಮಾಲೀಕರ ವಿರುದ್ಧ ಪೊಲೀಸರು ಬಿಎನ್‌ಎಸ್ ಸೆಕ್ಷನ್ 281 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾರನ್ನು ಸಹ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ
“ಇದು ರಸ್ತೆ, ರೇಸಿಂಗ್ ಟ್ರ್ಯಾಕ್ ಅಲ್ಲ” ಎಂದು ಓರ್ವ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇನ್ನೋರ್ವ ಬಳಕೆದಾರರು “ಅವರ ಆರ್‌ಸಿಯನ್ನು ಆರು ತಿಂಗಳ ಕಾಲ ಸ್ಥಗಿತಗೊಳಿಸಿ” ಎಂದು ಕಾಮೆಂಟ್ ಮಾಡಿದ್ದಾರೆ.

