ಬೆಳಗಾವಿ: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ಪ್ರಕರಣದ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೇ ಆಗಿರಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಬೆಳಗಾವಿಯ ನಂದಗಡದಲ್ಲಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ತಪ್ಪಿತಸ್ಥರು ಯಾರೇ ಇರಲಿ, ಯಾರೇ ತಪ್ಪು ಮಾಡಿದರೂ ಕಾನೂನು ರೀತಿ ಕ್ರಮ ಆಗಲಿದೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದರೆ, ಅವರು ಎಷ್ಟೇ ದೊಡ್ಡ ಅಧಿಕಾರಿ ಆಗಿದ್ದರೂ ಕಾನೂನು ಪ್ರಕಾರ ಕ್ರಮವಾಗುತ್ತದೆ ಎಂದರು.
ರಾಮಚಂದ್ರ ರಾವ್ ರಾಸಲೀಲೆ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪ್ರತಿಕ್ರಿಯಿಸಿದ್ದು, ಶಿಸ್ತು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ತಪ್ಪಿತಸ್ಥರು ಎಷ್ಟೇ ದೊಡ್ಡವರಾಗಿರಲಿ, ಶಿಕ್ಷೆಯಾಗಲಿದೆ ಎಂದು ತಿಳಿಸಿದ್ದಾರೆ.
ರಾಸಲೀಲೆ ಪ್ರಕರಣದ ವಿಡಿಯೋ ವೈರಲ್ ಆಗಿತ್ತಿದ್ದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿಗೆ ಬಂದ ರಾಮಚಂದ್ರ ರಾವ್ ಅವರನ್ನು ಭೇಟಿಯಾಗಲು ಗೃಹ ಸಚಿವರು ನಿರಾಕರಿಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಚಂದ್ರ ರಾವ್, ಗೃಹ ಸಚಿವರು ಅನಾರೋಗ್ಯ ಕಾರಣಕ್ಕೆ ಭೇಟಿಯಾಗಲು ನಿರಾಕರಿಸಿದ್ದಾರೆ ಎಂದು ತಿಳಿಸಿದ್ದಾರೆ.
ರಾಸಲೀಲೆ ವಿಡಿಯೋ ವಿಚಾರವಾಗಿ, ಇದು ಹಳೆಯ ವಿಡಿಯೋ. ಹಳೇ ವಿಡಿಯೋವನ್ನು ಯಾರೋ ದುರುದ್ದೇಶ ಕಾರಣಕ್ಕೆ ವೈರಲ್ ಮಾಡಿದ್ದಾರೆ. ಇದೀ ಈಗಿನ ಘಟನೆಗಳಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಇದು 8 ವರ್ಷದ ಹಳೇ ವಿಡಿಯೋ. ಈಗ ವೈರಲ್ ಮಾಡಿದ್ದಾರೆ. ಈ ಮೂಲಕ ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ನಾನು ಬೆಳಗಾವಿಯಲ್ಲಿದ್ದಾಗಿನ ಕಚೇರಿಯ ವಿಡಿಯೋವನ್ನು ಈಗ ವೈರಲ್ ಮಾಡಲಾಗಿದೆ. ಇದು ಸುಳ್ಳು ವಿಡಿಯೋ. ನನ್ನ ವಿರುದ್ಧ ಆರೋಪ ಮಾಡಲು ಈ ರೀತಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಮಚಂದ್ರ ರಾವ್ ಪ್ರಸ್ತುತ ಡಿಸಿಆರ್ ಇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಡಿಜಿಪಿ ಆಗಿದ್ದಾಗ ಕರ್ತವ್ಯದ ವೇಳೆ ಕಚೇರಿಯಲ್ಲಿಯೇ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾ ರಾವ್ ಅವರ ಮಲತಂದೆಯಾಗಿರುವ ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಕಚೇರಿಯಲ್ಲಿಯೇ ಮಹಿಳೆಯರ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿರುವ ಅಸಭ್ಯ ವಿಡಿಯೋಗಳು ವೈರಲ್ ಆಗಿದ್ದು, ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ನಟಿ ರನ್ಯಾರಾವ್ ಚಿನ್ನ ಕಳ್ಳ ಸಾಗಾಣೆ ಪ್ರಕರಣದಲ್ಲಿಯೂ ರಾಮಚಂದ್ರ ರಾವ್ ಹೆಸರು ತಳುಕು ಹಾಕಿಕೊಂಡಿತ್ತು.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಧಿಕಾರಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು. ಪ್ರಸ್ತುತ ರಾಮಚಂದ್ರರಾವ್ ಡಿಸಿಆರ್ ಇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರನ್ಯಾ ರಾವ್ ಪ್ರಕರಣಕ್ಕಿಂತಲೂ ಮೊದಲೇ ನಡೆದಿರುವ ರಾಸಲೀಲೆ ಪ್ರಕರಣ ಇದಾಗಿದ್ದು, ಕಚೇರಿಯಲ್ಲಿಯೇ, ಪೊಲೀಸ್ ಅಧಿಕಾರಿಯ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆಯ ಜೊತೆಗೆ ಹಸಿಬಿಸಿ ದೃಶ್ಯ, ರಾಸಲೀಲೆಯಲ್ಲಿ ಮೈಮರೆತಿರುವ ವಿಡಿಯೋಗಳು ಹರಿದಾಡುತ್ತಿವೆ.

