ಬೆಂಗಳೂರು:ಬೆಂಗಳೂರು ಅಂದ್ರೆ ಬರೀ ಟ್ರಾಫಿಕ್ ಜಾಮ್, ಸಿಗ್ನಲ್ ಕಾಯುವ ಕಿರಿಕಿರಿ ಮಾತ್ರವಲ್ಲ ಇಲ್ಲಿ ಜೀವನ ಕಟ್ಟಿಕೊಳ್ಳುವ ಸ್ಪೂರ್ತಿದಾಯಕ ಕಥೆಗಳಿಗೂ ಬರವಿಲ್ಲ ಇತ್ತೀಚೆಗೆ ಸಿಲಿಕಾನ್ ಸಿಟಿಯ ಟೆಕ್ಕಿಯೊಬ್ಬರು ಬುಕ್ ಮಾಡಿದ ಆಟೋ ಹತ್ತಿರ ಬಂದಾಗ ಅವರಿಗೆ ಕಾದಿತ್ತು ಒಂದು ಸಿಹಿ ಅಚ್ಚರಿ. ಆಟೋ ಸೀಟಿನಲ್ಲಿ ಕುಳಿತಿದ್ದು ಸಾಮಾನ್ಯ ಚಾಲಕನಲ್ಲ ಬದಲಾಗಿ ಆತ್ಮವಿಶ್ವಾಸದ ನಗು ಹೊತ್ತ ಮಹಿಳಾ ಚಾಲಕಿ.
ಕೋರಮಂಗಲದ ಈ ಮಹಿಳಾ ಚಾಲಕಿಯ ಕಾಯಕ ನಿಷ್ಠೆ ಮತ್ತು ಕಠಿಣ ಪರಿಶ್ರಮವನ್ನು ಕಂಡ ಟೆಕ್ಕಿ ಸ್ನೇಹಾ ಪ್ರಭು ಮತ್ತು ಅವರ ಸ್ನೇಹಿತರು ಅಕ್ಷರಶಃ ಫಿದಾ ಆಗಿದ್ದಾರೆ. ಟ್ರಾಫಿಕ್ ಕಿರಿಕಿರಿ ನಡುವೆಯೂ ಮೈಮನ ತುಂಬುವಂತಹ (Wholesome) ಈ ಅನುಭವವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಈ ಸ್ವಾಭಿಮಾನದ ಯಶೋಗಾಥೆ ಈಗ ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗಿದೆ
ನಮ್ಮ ಯಾತ್ರಿ ನೀಡಿದ ಹೊಸ ದಾರಿ
ಈ ಚಾಲಕಿ ನಮ್ಮ ಯಾತ್ರಿ ಆ್ಯಪ್ ಮೂಲಕ 40 ದಿನಗಳ ಕಠಿಣ ತರಬೇತಿ ಪಡೆದು ರಸ್ತೆಗಿಳಿದಿದ್ದಾರೆ. ಪೆಟ್ರೋಲ್ ಆಟೋಗಿಂತ ಎಲೆಕ್ಟ್ರಿಕ್ ಆಟೋ ಓಡಿಸುವುದು ಸುಲಭ ಎಂಬ ಕಾರಣಕ್ಕೆ ಪರಿಸರ ಸ್ನೇಹಿ ವಾಹನವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಸಾಲ ಮಾಡಿ ಆಟೋ ಖರೀದಿಸಿದ್ದರೂ, ಈ ವೃತ್ತಿಯಿಂದ ಅವರು ತಿಂಗಳಿಗೆ ಸರಾಸರಿ 45,000 ರೂಪಾಯಿ ಸಂಪಾದಿಸುತ್ತಿದ್ದಾರೆ. ಸಾಲದ ಮೂಲಕ ಆಟೋ ಖರೀದಿಸಿದ್ದ ಅವರು, ಈಗಾಗಲೇ 2.5 ಲಕ್ಷ ರೂಪಾಯಿ ಸಾಲ ಮರುಪಾವತಿಸಿದ್ದಾರೆ ಎಂಬುದು ವಿಶೇಷ.
ಬೆಂಗಳೂರಿನ ಕೋರಮಂಗಲ ಭಾಗವೊಂದರಲ್ಲೇ ಸುಮಾರು 300 ಮಹಿಳಾ ಆಟೋ ಚಾಲಕಿಯರಿದ್ದಾರೆ ಮತ್ತು ಇವರೆಲ್ಲರೂ ಒಂದು ವಾಟ್ಸಾಪ್ ಗ್ರೂಪ್ ಮೂಲಕ ಸಂಪರ್ಕದಲ್ಲಿದ್ದಾರೆ ಎಂಬ ವಿಷಯ ಟೆಕ್ಕಿಯನ್ನು ಅಚ್ಚರಿಗೊಳಿಸಿದೆ. ರಸ್ತೆಯಲ್ಲಿ ಜನರಿಂದ ಯಾವುದೇ ಕಿರುಕುಳ ಎದುರಾಗಿಲ್ಲ, ಬದಲಾಗಿ ಸಿಗ್ನಲ್ಗಳಲ್ಲಿ ಯುವಕ-ಯುವತಿಯರು ನಗುತ್ತಾ ಮಾತನಾಡಿಸುವುದು ತಮಗೆ ತುಂಬಾ ಖುಷಿ ನೀಡುತ್ತದೆ ಎಂದು ಚಾಲಕಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ
ವೈರಲ್ ಆದ ಪೋಸ್ಟ್ : ನೆಟ್ಟಿಗರ ಮೆಚ್ಚುಗೆ:
ಸ್ನೇಹಾ ಪ್ರಭು ಅವರ ಈ ಪೋಸ್ಟ್ ಅನ್ನು ಈಗಾಗಲೇ 30 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ಬಗ್ಗೆ ಕಾಮೆಂಟ್ ಮಾಡಿರುವ ಒಬ್ಬರು, “ಭಾರತದಲ್ಲಿ ಮಹಿಳಾ ಚಾಲಕಿಯರ ಸಂಖ್ಯೆ ಹೆಚ್ಚಾಗುತ್ತಿರುವುದು ಅತ್ಯಂತ ಖುಷಿಯ ವಿಚಾರ. ಇದರಿಂದ ರಾತ್ರಿ ವೇಳೆ ಸಂಚರಿಸುವ ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆ ಸಿಗುತ್ತದೆ” ಎಂದು ಬರೆದುಕೊಂಡಿದ್ದಾರೆ.”ಆತ್ಮವಿಶ್ವಾಸ, ಘನತೆ ಮತ್ತು ಸ್ವಾಭಿಮಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಈ ಮಹಿಳೆಯ ಸಾಧನೆ ನಗರದ ಪ್ರಗತಿಯನ್ನು ತೋರಿಸುತ್ತದೆ” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ

