ದಾವಣಗೆರೆ: ಕೆಲ ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಕಿತ್ತೂರು ಕಿರು ಮೃಗಾಲಯದಲ್ಲಿ 28 ಕೃಷ್ಣ ಮೃಗಗಳು ಮೃತಪಟ್ಟಿರುವ ಘಟನೆ ನಡೆದಿತ್ತು. ರಾಜ್ಯಾದ್ಯಂತ ಭಾರಿ ಚರ್ಚೆಗೂ ಗ್ರಾಸವಾಗಿತ್ತು. ಈ ಘಟನೆ ಮಾಸುವ ಮುನ್ನವೇ ರಾಜ್ಯದ ಮತ್ತೊಂದು ಕಿರು ಮೃಗಾಯಲದಲ್ಲಿ ಚುಕ್ಕೆ ಜಿಂಕೆಗಳು ಸಾಅವನ್ನಪ್ಪಿರುವ ಘಟನೆ ನಡೆದಿದೆ.
ದಾವಣಗೆರೆಯ ಕಿರು ಮೃಗಾಲಯದಲ್ಲಿ ಕಳೆದ ಮೂರು ದಿನಗಳಲ್ಲಿ 4 ಚುಕ್ಕೆ ಜಿಂಕೆಗಳು ಸಾವನ್ನಪ್ಪಿವೆ. ಹೆಮರಾಜಿಕ್ ಸೆಪ್ಪಿಸೆಮಿಯಾ ಎಂಬ ಸಾಂಕ್ರಾಮಿಕ ರೋಗದಿಂದಾಗಿ ಜಿಂಕೆಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮೃಗಾಲಯದ ಉಳಿದ ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮಾವಿ ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.
ಜನವರಿ 16 ರಂದು ಮೃಗಾಲಯದಲ್ಲಿ ಒಂದು ಚುಕ್ಕೆ ಜಿಂಕೆ ಸಾವನ್ನಪ್ಪಿತ್ತು. ಈ ಬಗ್ಗೆ ಪರಿಶೀಲಿಸುತ್ತಿದ್ದಾಗಲೇ ಮರುದಿನ ಮತ್ತೆರಡು ಜಿಂಕೆಗಳು ಮೃತಪಟ್ಟಿದ್ದವು. ಈಗ ಇನ್ನೊಂದು ಜಿಂಕೆ ಸಾವನ್ನಪ್ಪಿದ್ದು, ಒಟ್ಟು ನಾಲ್ಕು ಜಿಂಕೆಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.
ದಾವಣಗೆರೆ ಕಿರು ಮೃಗಾಲಯದಲ್ಲಿ 94 ಹೆಣ್ಣು 58 ಗಂಡು ಹಾಗೂ 18 ಮರಿಗಳು ಸೇರಿದಂತೆ ಒಟ್ಟು 170 ಚುಕ್ಕೆ ಜಿಂಕೆಗಳಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕರ ವೀಕ್ಷಣೆಗೆ ನಿಷೇಧಿಸಲಾಗಿದೆ.
ಜಿಂಕೆಗಳ ಸಾಅವಿನ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷವರ್ಧನ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ಸೋಂಕು ವ್ಯಾಪಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ವೈದ್ಯರು ಇತರೆ ಪ್ರಾಣಿಗಳ ಮೇಲೆ ನಿಗಾ ವಹಿಸಿದ್ದಾರೆ.

