HomeLatest Newsಕೊಹ್ಲಿ ಶತಕ ವ್ಯರ್ಥ, ತವರಿನಲ್ಲೇ ಭಾರತಕ್ಕೆ ಮುಖಭಂಗ: ಚೊಚ್ಚಲ ಏಕದಿನ ಸರಣಿ ಗೆದ್ದು ಬೀಗಿದ ನ್ಯೂಜಿಲೆಂಡ್

ಕೊಹ್ಲಿ ಶತಕ ವ್ಯರ್ಥ, ತವರಿನಲ್ಲೇ ಭಾರತಕ್ಕೆ ಮುಖಭಂಗ: ಚೊಚ್ಚಲ ಏಕದಿನ ಸರಣಿ ಗೆದ್ದು ಬೀಗಿದ ನ್ಯೂಜಿಲೆಂಡ್

ಇಂಧೋರ್‌ನ ಹೊಲ್ಕರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಮೂರನೇ ಏಕದಿನ ಪಂದ್ಯಗಳ ಸರಣಿಯ ಅಂತಿಮ ಪಂದ್ಯದಲ್ಲಿ ನ್ಯೂಜಿಲೆಂಡ್ 41 ರನ್‌ಗಳ ಗೆಲುವನ್ನು ಸಾಧಿಸುವ ಮೂಲಕ ಸರಣಿಯನ್ನು 2 – 1 ಅಂತರದಿಂದ ವಶಪಡಿಸಿಕೊಂಡಿದೆ.

ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 337 ರನ್ ಕಲೆಹಾಕಿ ಭಾರತಕ್ಕೆ 338 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಭಾರತ ಗೆಲ್ಲುವ ಭರವಸೆ ಮೂಡಿಸಿ 46 ಓವರ್‌ಗಳಿಗೆ 296 ರನ್ ಗಳಿಸಿ ಆಲ್‌ಔಟ್ ಆಗಿದೆ. ಈ ಮೂಲಕ ನ್ಯೂಜಿಲೆಂಡ್ ಇದೇ ಮೊದಲ ಬಾರಿಗೆ ಭಾರತದಲ್ಲಿ ಏಕದಿನ ಸರಣಿ ಗೆದ್ದ ಸಾಧನೆ ಮಾಡಿದೆ.

ನ್ಯೂಜಿಲೆಂಡ್ ಇನ್ನಿಂಗ್ಸ್: ಆರಂಭಿಕರಾಗಿ ಕಣಕ್ಕಿಳಿದ ಹೆನ್ರಿ ನಿಕೋಲ್ಸ್ ಹಾಗೂ ಡಿವಾನ್ ಕಾನ್ವೆ ಕ್ರಮವಾಗಿ ಮೊದಲ ಹಾಗೂ ಎರಡನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ನಿಕೋಲ್ಸ್ ಡಕ್‌ಔಟ್ ಆದರೆ, ಡಿವಾನ್ ಕಾನ್ವೆ 5 ರನ್ ಗಳಿಸಿದರು. ಹೀಗೆ ಕೇವಲ ಏಳು ಎಸೆತಗಳಲ್ಲಿ ತನ್ನ ಆರಂಭಿಕ ಆಟಗಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ನ್ಯೂಜಿಲೆಂಡ್ 30 ರನ್ ಗಳಿಸಿದ್ದ ವಿಲ್ ಯಂಗ್ ವಿಕೆಟ್ ಕಳೆದುಕೊಂಡಿತು. ಹೀಗೆ 58 ರನ್‌ಗೆ 3 ವಿಕೆಟ್ ಕಳೆದುಕೊಂಡ ನ್ಯೂಜಿಲೆಂಡ್‌ಗೆ ನಾಲ್ಕನೇ ವಿಕೆಟ್‌ಗೆ ಜತೆಯಾದ ಡ್ಯಾರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ಜೋಡಿ 219 ರನ್‌ಗಳ ಜತೆಯಾಟವಾಡುವ ಮೂಲಕ ಬೃಹತ್ ಆಸರೆಯಾಯಿತು. ಗ್ಲೆನ್ ಫಿಲಿಪ್ಸ್ 88 ಎಸೆತಗಳಲ್ಲಿ 106 ರನ್ ಬಾರಿಸಿದರೆ, ಡ್ಯಾರಿಲ್ ಮಿಚೆಲ್ 137 ರನ್ ಬಾರಿಸಿದರು. ಇನ್ನುಳಿದಂತೆ ಮಿಚೆಲ್ ಹೇ 2, ಜೇಕರಿ ಫೌಕ್ಸ್ 10, ಕ್ರಿಸ್ಟಿಯನ್ ಕ್ಲಾರ್ಕ್ 11, ಮಿಚೆಲ್ ಬ್ರೇಸ್‌ವೆಲ್ ಅಜೇಯ 22 ರನ್ ಹಾಗೂ ಯಾವುದೇ ರನ್ ಗಳಿಸದ ಜೇಮಿಸನ್ ಅಜೇಯರಾಗಿ ಉಳಿದರು.
ಭಾರತದ ಪರ ಅರ್ಷ್‌ದೀಪ್ ಸಿಂಗ್ 3 ವಿಕೆಟ್, ಹರ್ಷಿತ್ ರಾಣಾ 3 ವಿಕೆಟ್, ಮೊಹಮ್ಮದ್ ಸಿರಾಜ್ ಹಾಗೂ ಕುಲ್‌ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತ ಇನ್ನಿಂಗ್ಸ್: ನ್ಯೂಜಿಲೆಂಡ್ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಲು ಮುಂದಾದ ಭಾರತ 71 ರನ್‌ಗೆ 4 ವಿಕೆಟ್ ಕಳೆದುಕೊಳ್ಳುವ ಮೂಲಕ ಭಾರೀ ಹಿನ್ನಡೆ ಅನುಭವಿಸಿತು. ರೋಹಿತ್ ಶರ್ಮಾ 11 ರನ್ ಗಳಿಸಿದರೆ, ನಾಯಕ ಶುಬ್‌ಮನ್ ಗಿಲ್ 23 ರನ್, ಶ್ರೇಯಸ್ ಐಯ್ಯರ್ 3, ಕೆಎಲ್ ರಾಹುಲ್ 1 ರನ್ ಕಲೆಹಾಕಿ ಬೇಗನೆ ಪೆವಿಲಿಯನ್ ಸೇರಿಕೊಂಡರು. ಈ ಸಮಯದಲ್ಲಿ ಏಕಾಂಗಿ ಹೋರಾಟ ನಡೆಸುತ್ತಿದ್ದ ಕೊಹ್ಲಿಗೆ ಜತೆಯಾದ ನಿತಿಶ್ ಕುಮಾರ್ ರೆಡ್ಡಿ 53 ರನ್ ಬಾರಿಸಿ ಕೊಹ್ಲಿ ಜತೆ 88 ರನ್‌ಗಳ ಜತೆಯಾಟವನ್ನಾಡಿ ತಂಡಕ್ಕೆ ಸುಧಾರಣೆ ತಂದರು. ಬಳಿಕ ರವೀಂದ್ರ ಜಡೇಜಾ 12 ರನ್‌ಗೆ ವಿಕೆಟ್ ಒಪ್ಪಿಸಿದರು. ಹೀಗೆ ಕೊಹ್ಲಿ ಮತ್ತೆ ಏಕಾಂಗಿ ಎನ್ನುವ ಹೊತ್ತಿಗೆ ಕಣಕ್ಕಿಳಿದ ಹರ್ಷಿತ್ ರಾಣಾ 43 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿಗಳನ್ನೊಳಗೊಂಡಂತೆ 52 ರನ್ ಬಾರಿಸಿ 99 ರನ್‌ಗಳ ಜತೆಯಾಟವನ್ನಾಡಿದರು. ಬೆನ್ನಲ್ಲೇ ಮೊಹಮ್ಮದ್ ಸಿರಾಜ್ ಯಾವುದೇ ರನ್ ಗಳಿಸದೇ ಗೋಲ್ಡನ್ ಡಕ್‌ಔಟ್ ಆದರು. ಕೊಹ್ಲಿ 108 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸೇರಿದಂತೆ 124 ರನ್ ಬಾರಿಸಿ 54ನೇ ಏಕದಿನ ಶತಕ ದಾಖಲಿಸಿದರು. ಅಂತಿಮವಾಗಿ ಕುಲ್‌ದೀಪ್ ಯಾದವ್ 5 ರನ್ ಗಳಿಸಿದರೆ, ಅರ್ಷ್‌ದೀಪ್ ಸಿಂಗ್ ಅಜೇಯ 4 ರನ್ ಗಳಿಸಿದರು.

ನ್ಯೂಜಿಲೆಂಡ್ ಪರ ಜೇಕರಿ ಫೋಕ್ಸ್ ಹಾಗೂ ಕ್ರಿಸ್ಟಿಯನ್ ಕ್ಲಾರ್ಕ್ ತಲಾ 3 ವಿಕೆಟ್ ಪಡೆದರೆ, ಜೇಡನ್ ಲೆನ್ನಾಕ್ಸ್ 2 ವಿಕೆಟ್ ಹಾಗೂ ಕೈಲ್ ಜೇಮಿಸನ್ ಒಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular