ಬೆಂಗಳೂರು: ನಗರದ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಮಾಲ್, ಪೆಟ್ರೋಲ್ ಬಂಕ್ ಮತ್ತು ವಾಣಿಜ್ಯ ಸಂಸ್ಥೆ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಸಿಬ್ಬಂದಿಗೆ ಕಡ್ಡಾಯವಾಗಿ ಶೌಚಾಲಯ ಬಳಕೆಗೆ ಅನುಮತಿ ನೀಡಬೇಕು ಎಂದು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಸೂಚಿಸಿದ್ದಾರೆ.
ಸ್ವಚ್ಛತಾ ಸಿಬ್ಬಂದಿಗೆ ಶೌಚಾಲಯ ಬಳಕೆಗೆ ಅವಕಾಶ ನೀಡುತ್ತಿಲ್ಲ ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಿಗೆ ದೂರು ನೀಡಿದ್ದರು. ಈ ಬಗ್ಗೆ ಅಧ್ಯಕ್ಷರು ಆಯುಕ್ತರಿಗೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ನಿರ್ದೇಶನ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಬೆಂಗಳೂರಿನ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಮಾಲ್, ಪೆಟ್ರೋಲ್ ಬಂಕ್ ಮತ್ತು ವಾಣಿಜ್ಯ ಸಂಸ್ಥೆಗಳು ಸೇರಿ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಸಿಬ್ಬಂದಿಗೆ ಕಡ್ಡಾಯವಾಗಿ ಶೌಚಾಲಯ ಬಳಕೆಗೆ ಅನುಮತಿ ನೀಡಬೇಕು. ನಿರ್ಬಂಧಿಸಿದಲ್ಲಿ ಅಥವಾ ಅಡ್ಡಿಪಡಿಸಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

