ತುಮಕೂರು: ತಂದೆ ದಾನ ಮಾಡಿದ ಜಾಗದಲ್ಲಿ ನಿರ್ಮಿಸಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಪುತ್ರ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆಯಲ್ಲಿ ನಡೆದಿದೆ.
ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಸಾಧಿಕ್ ಭೂಮಿ ದಾನ ಮಾಡಿದ್ದರು. ಅವರ ಪುತ್ರ ಸೈಯದ್ ಅಕ್ರಂ(42) ಅವರಿಗೆ ಸೂಕ್ತ ಸಮಯಕ್ಕೆ ಪ್ರಥಮ ಚಿಕಿತ್ಸೆ ಮತ್ತು ಆಂಬುಲೆನ್ಸ್ ಸಿಗದೇ ಅದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸಾಧಿಕ್ ಅವರು ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಲು ಕೋಟ್ಯಂತರ ರೂಪಾಯಿ ಮೌಲ್ಯದ ಜಾಗವನ್ನು ಸರ್ಕಾರಕ್ಕೆ ದಾನ ಮಾಡಿದ್ದರು. ಆದರೆ, ಅವರ ಪುತ್ರನಿಗೆ ಆಸ್ಪತ್ರೆಯಲ್ಲಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಕ್ಕಿಲ್ಲ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಕೂಡ ಬರಲಿಲ್ಲ. ಇದರಿಂದ ಅಕ್ರಂ ಮೃತಪಟ್ಟಿದ್ದಾರೆ.
ಶನಿವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಹೊಸಕೋಟೆ ಗ್ರಾಮದ ಸೈಯದ್ ಅಕ್ರಂ ಅವರಿಗೆ ಉಸಿರಾಟ ತೊಂದರೆಯಾಗಿದ್ದು ಮನೆಯವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಪಾವಗಡಕ್ಕೆ ಕರೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ್ದಾರೆ. ಕುಟುಂಬದವರು ಕರೆ ಮಾಡಿ ಒಂದೂವರೆ ಗಂಟೆ ಕಳೆದರೂ ಆಂಬುಲೆನ್ಸ್ ಬಂದಿಲ್ಲ. ಅಕ್ರಂ ಅವರ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ್ದು ಮನೆಯವರ ಮನವಿ ಮೇರೆಗೆ ವೈದ್ಯರು ಎಮರ್ಜೆನ್ಸಿ ಕೊಠಡಿಯಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಅಕ್ರಂ ಮೃತಪಟ್ಟಿದ್ದಾರೆ.

