ಮೈಸೂರು : ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಅಶ್ಲೀಲ ನಿಂದನೆ, ಬೆದರಿಕೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಹೌದು ಮೈಸೂರು ದಕ್ಷಿಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳೀಯ ವ್ಯಕ್ತಿ ಪುಟ್ಟಸ್ವಾಮಿ ಎಂಬಾತ ಗ್ರಾಮದ ಆಡಳಿತ ಅಧಿಕಾರಿಗೆ ಕೊಲೆ ಬೆದರಿಕೆ ಹಾಕಿ ನಿಂದಿಸಿದ್ದಾನೆ ಎನ್ನಲಾಗಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ ಪುಟ್ಟಸ್ವಾಮಿ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ ಹಾಕಿ ಮೊಬೈಲ್ ಕಿತ್ತುಕೊಂಡಿದ್ದಾನೆ. ಮೈಸೂರು ತಾಲೂಕಿನ ಗುಡಮಾದನಹಳ್ಳಿಯಲ್ಲಿ ಈ ಘಟನೆ ನಡೆದಿದೆ.ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿದ ಹಿನ್ನೆಲೆ ಪುಟ್ಟಸ್ವಾಮಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜಮೀನು ಪರಿಶೀಲನೆಗೆ ತೆರಳಿದ ಗ್ರಾಮ ಆಡಳಿತ ಅಧಿಕಾರಿ ಜಿ. ಭವ್ಯಗೆ ಬೆದರಿಕೆ ಹಾಕಲಾಗಿದೆ. ಭವ್ಯ ಅವರು ಗ್ರಾಮ ಸಹಾಯಕ ನವೀನ್ ಕುಮಾರ್ ಜೊತೆ ಜಮೀನು ಪರಿಶೀಲನೆಗೆ ಹೋದಾಗ ಕೊಲೆ ಬೆದರಿಕೆ ಹಾಕಲಾಗಿದೆ. ನವೀನ್ ಅವರು ತಮ್ಮ ಮೊಬೈಲ್ ನಲ್ಲಿ ಜಮೀನಿನ ವಿಡಿಯೋ ಚಿತ್ರೀಕರಿಸುತ್ತಿದ್ದಾಗ ಪುಟ್ಟಸ್ವಾಮಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಮೊದಲು ನಿನ್ನ ಹೆಣ ಬೀಳುತ್ತೆ ಎಂದು ಪುಟ್ಟಸ್ವಾಮಿ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದ್ದಾನೆ. 2025 ರ ಡಿ.31 ರಂದು ಪುಟ್ಟಸ್ವಾಮಿ ಹಾಕಿದ್ದ ಬೆದರಿಕೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸಂಬಂಧ ಪುಟ್ಟಸ್ವಾಮಿ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

