ಭೋಪಾಲ್: ವ್ಯಕ್ತಿಯೋರ್ವ, ಮಗುವಿಗೆ ಎದೆಹಾಲುಣಿಸುತ್ತಿದ್ದ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದಿದ್ದು, ಇದೇ ವೇಳೆ ಉಸಿರುಗಟ್ಟಿ ಮಗು ಕೂಡ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಖಾರ್ಗೋನ್ ಎಂಬಲ್ಲಿನ ಬಕಾವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಂಪಾಬಾಯಿ ಹಾಗೂ 6 ತಿಂಗಳ ಮಗು ಮೃತರು. ಚಂಪಾಬಾಯಿ ಪತಿ ಸುನಿಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನೇ ಪತ್ನಿಯನ್ನು ಕೊಲೆಗೈದಿರುವುದು ಬೆಳಕಿಗೆ ಬಂದಿದೆ.
ಪತಿ-ಪತ್ನಿ ನಡುವೆ ಜಗಳವಾಗಿತ್ತು. ಚಂಪಾಬಾಯಿ ಮಗುವಿಗೆ ಹಾಲುಣಿಸುತ್ತಿದ್ದಳು. ಈ ವೇಳೆ ಪತಿ ಸುನಿಲ್ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಪತ್ನಿಯನ್ನು ಬಾಗಿಲಿಗೆ ತಳ್ಳಿ, ದೊಣ್ಣೆಯಿಂದ ಹೊಡೆದಿದ್ದಾನೆ. ಸ್ಥಳದಲ್ಲೇ ಪತ್ನಿ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ. ಆದರೂ ಪತಿ ಮಹಾಶಯ ಪತ್ನಿಯ ಮೇಲೆ ಕಿಂಚಿತ್ತೂ ಕರುಣೆ ತೋರಿಲ್ಲ. ತನ್ನಪಾಡಿಗೆ ತಾನು ಮಲಗಿ ನಿದ್ರೆಗೆ ಜಾರಿದ್ದಾನೆ. ಬೆಳಿಗ್ಗೆ ಎದ್ದು ನೋಡಿದಾಗ ಪತ್ನಿ ಬಿದ್ದಲ್ಲಿಯೇ ಸಾವನ್ನಪ್ಪಿದ್ದಳು. ಪಕ್ಕದಲ್ಲಿ 6 ತಿಂಗಳ ಕಂದಮ್ಮ ಕೂಡ ಮೃತಪಟ್ಟಿರುವುದು ಕಂಡು ಆಘಾತಗೊಂಡಿದ್ದಾನೆ. ಸದ್ಯ ಪೊಲೀಸರು ಆರೋಪಿ ಸುನಿಲ್ ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.

