ಸಿನಿಮಾ ಲೋಕದಲ್ಲಿ ಸೋಲು-ಗೆಲುವು ಸಹಜ. ಆದರೆ ಕೆಲವು ಸಿನಿಮಾಗಳು ದೊಡ್ಡ ತಾರಾಗಣ ಹೊಂದಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ದಯನೀಯವಾಗಿ ಸೋಲುತ್ತವೆ. ಅಂತಹದ್ದೇ ಸಾಲಿಗೆ ಸೇರಿದೆ 2025ರ ಬಹುನಿರೀಕ್ಷಿತ ಚಿತ್ರವೊಂದು. ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಚಿತ್ರಮಂದಿರದಲ್ಲಿ ಗಳಿಸಿದ್ದು ಕೇವಲ 1.28 ಕೋಟಿ ರೂಪಾಯಿ ಮಾತ್ರ! ಈಗ ಈ ಸಿನಿಮಾ ಯಾವುದೇ ಸದ್ದಿಲ್ಲದೆ ಒಟಿಟಿಯಲ್ಲಿ ಬಿಡುಗಡೆಯಾಗಿದೆ.
ಸಿನಿಮಾ ಯಾವುದು? ತಾರಾಗಣ ಯಾರಿದ್ದಾರೆ? ನಾವು ಹೇಳುತ್ತಿರುವುದು ಸೋನಾಕ್ಷಿ ಸಿನ್ಹಾ ಪ್ರಧಾನ ಪಾತ್ರದಲ್ಲಿ ನಟಿಸಿರುವ ‘ನಿಕಿತಾ ರಾಯ್’ (Nikita Roy) ಚಿತ್ರದ ಬಗ್ಗೆ. ಈ ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ಚಿತ್ರದಲ್ಲಿ ಸೋನಾಕ್ಷಿ ಜೊತೆಗೆ ಖ್ಯಾತ ನಟರಾದ ಅರ್ಜುನ್ ರಾಂಪಾಲ್, ಪರೇಶ್ ರಾವಲ್ ಮತ್ತು ಸುಹೇಲ್ ನಯ್ಯರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಸೋನಾಕ್ಷಿ ಸಿನ್ಹಾ ಅವರ ಸಹೋದರ ಕುಶ್ ಸಿನ್ಹಾ ಈ ಚಿತ್ರದ ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಚಿತ್ರಮಂದಿರದಲ್ಲಿ ಹೀನಾಯ ಸೋಲು 2025ರ ಜುಲೈ ತಿಂಗಳಿನಲ್ಲಿ ತೆರೆಕಂಡ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇತ್ತು. ಆದರೆ ಪ್ರೇಕ್ಷಕರು ಈ ಚಿತ್ರದತ್ತ ಮುಖ ಮಾಡಲೇ ಇಲ್ಲ. 25 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 1.5 ಕೋಟಿ ರೂಪಾಯಿ ಗಳಿಸಲು ಕೂಡ ಪರದಾಡಿತು. ಅಂತಿಮವಾಗಿ ಕೇವಲ 1.28 ಕೋಟಿ ರೂಪಾಯಿ ಗಳಿಸುವ ಮೂಲಕ ಸೋನಾಕ್ಷಿ ವೃತ್ತಿಜೀವನದ ಅತಿದೊಡ್ಡ ಸೋಲಿನ ಚಿತ್ರವಾಗಿ ಇದು ದಾಖಲಾಯಿತು.
ಚಿತ್ರದ ಕಥಾಹಂದರ ಮತ್ತು ಒಟಿಟಿ ರಿಲೀಸ್ ಐಎಂಡಿಬಿಯಲ್ಲಿ 5.7 ರೇಟಿಂಗ್ ಪಡೆದಿರುವ ಈ ಚಿತ್ರದ ಕಥೆ ಸುನಿಲ್ ರಾಯ್ (ಅರ್ಜುನ್ ರಾಂಪಾಲ್) ಎಂಬಾತನ ನಿಗೂಢ ಸಾವಿನ ಸುತ್ತ ಸುತ್ತುತ್ತದೆ. ಸುನಿಲ್ ತನ್ನ ಪ್ರಾಣಕ್ಕೆ ಅಪಾಯವಿದೆ ಎಂಬ ಭೀತಿಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆದರೆ ಸುನಿಲ್ ತಂಗಿ ನಿಕಿತಾ ರಾಯ್ (ಸೋನಾಕ್ಷಿ ಸಿನ್ಹಾ) ಇದೊಂದು ಕೊಲೆ ಎಂದು ಸಂಶಯಿಸಿ ತನಿಖೆ ಆರಂಭಿಸುತ್ತಾಳೆ. ಈ ತನಿಖೆಯ ಹಾದಿಯಲ್ಲಿ ಅವಳಿಗೆ ಆಧ್ಯಾತ್ಮಿಕ ಗುರು ಬಾಬಾ ಅಮರದೇವ್ (ಪರೇಶ್ ರಾವಲ್) ಅವರ ರಹಸ್ಯಗಳು ತಿಳಿಯುತ್ತವೆ.
ಚಿತ್ರಮಂದಿರದಲ್ಲಿ ಹೀನಾಯವಾಗಿ ಸೋತರೂ, ಇದೀಗ ಜಿಯೋ ಹಾಟ್‌ಸ್ಟಾರ್ (Jio Hotstar) ಒಟಿಟಿ ವೇದಿಕೆಯಲ್ಲಿ ಈ ಚಿತ್ರ ಸದ್ದಿಲ್ಲದೆ ಬಿಡುಗಡೆಯಾಗಿದೆ. ಕುತೂಹಲಕಾರಿ ವಿಷಯವೆಂದರೆ ಚಿತ್ರಮಂದಿರದಲ್ಲಿ ನೋಡದ ಪ್ರೇಕ್ಷಕರು ಈಗ ಒಟಿಟಿಯಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

