‘ಇದ್ರೆ ನೆಮ್ಮದಿಯಾಗಿ ಇರಬೇಕು’ ಎಂಬುದು ನಟ ದರ್ಶನ್ ಅಭಿನಯದ ‘ಡೆವಿಲ್’ ಚಿತ್ರದ ಹಾಡು. ಜೀವನದಲ್ಲೂ ನೆಮ್ಮದಿ ಬೇಕು. ದೊಡ್ಡ ಕಂಪನಿ ಕೆಲಸ, ಕೈ ತುಂಬಾ ಸಂಬಳ ನೆಮ್ಮದಿ ತಂದು ಕೊಡುವುದಿಲ್ಲ ಎಂಬುದನ್ನು ಟೆಕ್ಕಿಯೊಬ್ಬ ಮನವರಿಕೆ ಮಾಡಿಕೊಟ್ಟಿದ್ದಾನೆ.
ಹೌದು ಇದು ಮನೀಶ್ ಕುಮಾರ್ ಎಂಬ ಸಾಫ್ಟ್ವೇರ್ ಇಂಜಿನಿಯರ್ ಬದುಕಿನ ಕಥೆ. ಜಾರ್ಖಂಡ್ನ ದುಮ್ಕಾ ಎಂಬ ಹಳ್ಳಿಯಿಂದ ಬಂದ ಮನೀಶ್ ಕುಮಾರ್ ಕೋಲ್ಕತ್ತಾದಲ್ಲಿರುವ ಟಿಸಿಎಸ್ ಕಂಪನಿಯಲ್ಲಿ ಕೆಲಸ ಪಡೆಯುವಲ್ಲಿ ಯಶಸ್ವಿಯಾದರು.
ಮಗನಿಗೆ ಟಿಸಿಎಸ್ನಂತಹ ಕಂಪನಿಯಲ್ಲಿ ಕೆಲಸ ಸಿಕ್ಕಾಗ ಪೋಷಕರು ಸಂತಸಗೊಂಡಿದ್ದರು. ಇದು ಮಗನ ವೃತ್ತಿ ಜೀವನದ ಉತ್ತಮ ತಿರುವು ಎಂದು ಕುಟುಂಬ ಭಾವಿಸಿತ್ತು. ಆದರೆ ಈಗ ಆಗಿರುವುದು ಬೇರೆ ಟೆಕ್ಕಿಯಾಗಿದ್ದ ಮನೀಶ್ ಕುಮಾರ್ ಈಗ ಅರಣ್ಯ ಇಲಾಖೆಗೆ ಸೇರಿದ್ದಾರೆ.
ಮಾನಸಿಕ ನೆಮ್ಮದಿ ಇಲ್ಲ: ಮನೀಶ್ ಕುಮಾರ್ ತಂದೆ ಸ್ಥಳೀಯ ಅರಣ್ಯ ರಕ್ಷಕರೊಂದಿಗೆ ದಿನಗೂಲಿ ನೌಕರರಾಗಿದ್ದರು. ಮನೀಶ್ ಹೆಚ್ಚಾಗಿ ತಂದೆಯೊಂದಿಗೆ ಕಾಡಿನಲ್ಲಿ ಸಮಯ ಕಳೆದಿದ್ದರು. ಸಹಜವಾಗಿಯೇ ವನ್ಯಜೀವಿಗಳ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿಯನ್ನು ಬೆಳೆಸಿಕೊಂಡಿದ್ದರು.
ಮನೀಶ್ ಕುಮಾರ್ ಟಿಸಿಎಸ್ ಸೇರಿದ ಕೇವಲ ಒಂದು ತಿಂಗಳಲ್ಲೇ ಕೆಲಸಕ್ಕೆ ರಾಜೀನಾಮೆ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯನ್ನು ಆರಂಭಿಸಿದ್ದರು. ಇದು ಯಾರೂ ಸಹ ನಿರೀಕ್ಷೆ ಮಾಡದ ನಡೆಯಾಗಿತ್ತು. ಈಗ ಸುಮಾರು 6 ವರ್ಷಗಳ ನಂತರ 30 ವರ್ಷದ ಮನೀಶ್ ತಮ್ಮ ಸ್ವಂತ ಜಿಲ್ಲೆಯಾದ ದುಮ್ಕಾ ಬಳಿ ಬೀಟ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅವರು ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಪ್ರಕೃತಿಯ ಮಡಿಲಿನಲ್ಲಿಯೂ ಇರುವಂತಾಗಿದೆ.
ಕೌಟುಂಬಿಕ ವಾತಾವರಣ, ನೆಮ್ಮದಿ, ಕಾಡಿನ ನಂಟನ್ನು ಮನೀಶ್ ಕೋಲ್ಕತ್ತಾ ನಗರದಲ್ಲಿ ಅವರು ಮಿಸ್ ಮಾಡಿಕೊಳ್ಳುತ್ತಿದ್ದರು. ಟಿಸಿಎಸ್ ಕೆಲಸ ಬಿಟ್ಟು ಅರಣ್ಯ ಇಲಾಖೆ ಸೇರಿರುವ ಬಗ್ಗೆ ಅವರಿಗೆ ಯಾವುದೇ ಹಿಂಜರಿಕೆ ಇಲ್ಲ. “ತಂತ್ರಜ್ಞಾನ ಆಧಾರಿತ ಉದ್ಯೋಗದ ಜೀವನ ನನ್ನದಲ್ಲ ಎಂದು ನನಗೆ ಅರಿವಾಯಿತು. ಅಲ್ಲಿ ಮನಸ್ಸಿಗೆ ಶಾಂತಿ ಇರಲಿಲ್ಲ” ಎಂದು ಮನಿಕಂಟ್ರೋಲ್ ಜೊತೆ ಮನೀಶ್ ಕುಮಾರ್ ಮಾತನಾಡಿದ್ದಾರೆ.
ಒಂದು ತಿಂಗಳು ಕೆಲಸ: ಮನೀಶ್ ಪದವಿ ಬಳಿಕ ಶ್ರೀರಾಮ್ ಫೈನಾನ್ಸ್ನಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿದರು. ನಂತರ ಟಿಸಿಎಸ್ನಲ್ಲಿ ಕೆಲಸಕ್ಕೆ ಸೇರಿದರು. “ಟಿಸಿಎಸ್ ಸೇರಿದ ಒಂದು ತಿಂಗಳಲ್ಲೇ ಇದು ನನಗಾಗಿ ಅಲ್ಲ ಎಂಬುದು ನನಗೆ ತಿಳಿಯಿತು. ಪ್ರಕೃತಿಯ ಹತ್ತಿರ ಇರಬೇಕೆಂಬ ಹಂಬಲ ಹೆಚ್ಚಾಯಿತು. ನಾನು ಒಂದು ತಿಂಗಳಲ್ಲೇ ರಾಜೀನಾಮೆ ನೀಡಿದೆ. ಕಡಿಮೆ ಸಂಬಳದ ಕೆಲಸ ಮತ್ತು ಇತರ ಆಯ್ಕೆಗಳನ್ನು ಹುಡುಕಿದೆ” ಎಂದು ಹೇಳಿದ್ದಾರೆ.
ಮನೀಶ್ ನಿರ್ಧಾರಕ್ಕೆ ಪೋಷಕರು ಬೆಂಬಲ ನೀಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಯತ್ನಿಸುವಂತೆ ಸಲಹೆ ನೀಡಿದರು. ಅದಕ್ಕೆ ಒಪ್ಪಿದ ಕುಮಾರ್ ಸುಮಾರು ಆರು ತಿಂಗಳು ಪರೀಕ್ಷೆಗೆ ಸಿದ್ಧತೆ ನಡೆಸಿ, ಅಂತಿಮವಾಗಿ ಅರಣ್ಯ ರಕ್ಷಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
6 ವರ್ಷಗಳಿಂದ ಬೀಟ್ ಆಫೀಸರ್ ಆಗಿ ಮನೀಶ್ ಕುಮಾರ್ ಕೆಲಸ ಮಾಡುತ್ತಿದ್ದಾರೆ. ವನ್ಯಜೀವಿಗಳನ್ನು ರಕ್ಷಿಸುವುದು ಮತ್ತು ಅಪರಾಧ ಚಟುವಟಿಕೆಗಳನ್ನು ತಡೆಯುವುದರ ಜೊತೆಗೆ, ದೂರದ ಪ್ರದೇಶಗಳ ಬುಡಕಟ್ಟು ಜನರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ.
ಪ್ರವಾಸೋದ್ಯಮವನ್ನು ಉತ್ತೇಜಿಸುವ ಜವಾಬ್ದಾರಿಯನ್ನು ಸಹ ಅವರಿಗೆ ನೀಡಲಾಗಿದೆ. ಅವರು ಪ್ರಸ್ತುತ ಜಾರ್ಖಂಡ್ನ ಮಸಂಜೋರ್ ಅಣೆಕಟ್ಟಿನ ದಡದಲ್ಲಿ ಸರ್ಕಾರಿ ಸ್ವಾಮ್ಯದ ಪರಿಸರ ಪ್ರವಾಸೋದ್ಯಮ ರೆಸಾರ್ಟ್ ಅನ್ನು ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ.
“ಕಾರ್ಪೊರೇಟ್ ಕೆಲಸ ಬಿಟ್ಟಿದ್ದಕ್ಕೆ ತಮಗೆ ಸಂತೋಷವಿದೆ. ನಾನು ಇದಕ್ಕಿಂತ ಹೆಚ್ಚು ಸಂತೋಷವಾಗಿರಲು ಸಾಧ್ಯವಿಲ್ಲ. ನಾನು ಯಾವಾಗಲೂ ಪ್ರಕೃತಿಗೆ ಹತ್ತಿರವಿರಲು ಬಯಸಿದ್ದೆ ಮತ್ತು ಸಮಾಜ ಸೇವೆ ಮಾಡುವ ಆಸೆ ನನಗೂ ಹಾಗೂ ನನ್ನ ಕುಟುಂಬಕ್ಕೂ ಇತ್ತು. ಈ ಕೆಲಸವು ನಾನು ಬಯಸಿದ್ದನ್ನೆಲ್ಲವನ್ನೂ ಮಾಡಲು ಅವಕಾಶ ನೀಡಿದೆ” ಎಂದು ತಿಳಿಸಿದರು.

