ಉತ್ತರ ಪ್ರದೇಶದ ಕುಶಿನಗರದ ಶಾಂತ ಹಳ್ಳಿಯೊಂದು ಸೋಮವಾರ ಬೆಳಿಗ್ಗೆ ಊಹಿಸಲಾಗದ ಭಯಾನಕತೆಯನ್ನು ಕಂಡಿದೆ, ಕೌಟುಂಬಿಕ ಕಲಹದಿಂದ ಇಬ್ಬರ ಹತ್ಯೆ ನಡೆದಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಅಹಿರೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪರ್ಸಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ನೋಡುತ್ತಿದ್ದಾಗ 30 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿ ಮತ್ತು ಹೆಂಡತಿಯನ್ನು ಮನೆಯ ಮೇಲ್ಛಾವಣಿಯಲ್ಲಿ ಕೊಂದಿದ್ದಾನೆ. ಅವರ ದೇಹಗಳಿಂದ ಮಾಂಸ ಕತ್ತು ತಿಂದಿದ್ದಾನೆ. ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಆರೋಪಿ ಸಿಕಂದರ್ ಗುಪ್ತಾನನ್ನು ಸ್ಥಳದಲ್ಲೇ ಬಂಧಿಸಲಾಗಿದೆ.
ಕಿರುಚಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಅವರು ಮುಂದೆ ಕಂಡದ್ದು ಭಯಾನಕ ದೃಶ್ಯ. ಸಿಕಂದರ್ ಎಂಬಾತ ತಾಯಿ, ಪತ್ನಿಯನ್ನು ಕೊಂದು ಅವರ ದೇಹದಿಂದ ಮಾಂಸ ಕಿತ್ತು ತಿಂದಿದ್ದಾನೆ.
ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಿಕಂದರ್ ಸುಮಾರು ಒಂದು ತಿಂಗಳ ಹಿಂದೆ ತನ್ನ ಗ್ರಾಮಕ್ಕೆ ಮರಳಿದ್ದ. ಮದ್ಯ ಮತ್ತು ಗಾಂಜಾ ವ್ಯಸನಿಯಾಗಿದ್ದ. ಅವರ ಪತ್ನಿ ಪ್ರಿಯಾಂಕಾ(28) ಮತ್ತು ಅವರ ತಾಯಿ ರೂನಾ ದೇವಿ(60) ಇಬ್ಬರ ಮೇಲೂ ಹಲ್ಲೆ ನಡೆಸಿದ್ದ. ಜಗಳದ ಸಮಯದಲ್ಲಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ.
ಇಬ್ಬರೂ ಮಹಿಳೆಯರನ್ನು ಮನೆಯ ಮೇಲ್ಛಾವಣಿಯ ಮೇಲೆ ಕೋಲುಗಳಿಂದ ಹಲ್ಲೆ ಮಾಡಿ ನಂತರ ಸಿಮೆಂಟ್ ಇಟ್ಟಿಗೆ ಬಳಸಿ ಮಾರಣಾಂತಿಕ ಗಾಯಗಳನ್ನು ಮಾಡಿದ್ದಾನೆ. ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹತ್ಯೆಗಳ ನಂತರ ಶವಗಳು ತೀವ್ರವಾಗಿ ಛಿದ್ರಗೊಂಡಿವೆ ಎಂದು ಕುಶಿನಗರ ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಮಿಶ್ರಾ ಮಾಹಿತಿ ನೀಡಿದ್ದಾರೆ.

