ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬ ತಾನು ಎರಡನೇ ಮದುವೆ ಮಾಡಿಕೊಳ್ಳಲು ಒಪ್ಪಿಗೆ ನೀಡುತ್ತಿಲ್ಲ ಎಂದು ಪತ್ನಿಯನ್ನೇ ಕೊಲೆ ಮಾಡಿದ್ದಾನೆ.
ಹೊಳೆಹೊನ್ನೂರು ಸಮೀಪದ ಬೊಮ್ಮನಕಟ್ಟೆ ಪಂಡರಹಳ್ಳಿ ಕ್ಯಾಂಪ್ ನಲ್ಲಿ ಭಾನುವಾರ ಘಟನೆ ನಡೆದಿದೆ. ಚಂದನಾಬಾಯಿ(23) ಕೊಲೆಯಾದ ಮಹಿಳೆ. ಆರೋಪಿ ಗೋಪಿ(28) ಅಕ್ರಮ ಸಂಬಂಧ ಹೊಂದಿದ್ದ. ಈ ಬಗ್ಗೆ ದಂಪತಿಯ ನಡುವೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ.
ಮತ್ತೊಂದು ಮದುವೆಯಾಗುವುದಾಗಿ ಹೇಳುತ್ತಿದ್ದ ಆರೋಪಿ ಗೋಪಿ ಅದಕ್ಕೆ ಒಪ್ಪಿಗೆ ನೀಡುವಂತೆ ಪತ್ನಿಗೆ ಒತ್ತಾಯಿಸುತ್ತಿದ್ದ. ನಿರಂತರವಾಗಿ ಹಲ್ಲೆ ಮಾಡುತ್ತಿದ್ದ. ಭಾನುವಾರ ಸಂಜೆ ಮನೆಯಲ್ಲಿದ್ದ ಎಲ್ಲರನ್ನೂ ಹೊರಗೆ ಕಳುಹಿಸಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಹೊಳೆಹೊನ್ನೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

