ಬೆಂಗಳೂರು-ತುಮಕೂರು ನಡುವೆ ಪ್ರತಿದಿನ ಸಾವಿರಾರು ಜನರು ಸಂಚಾರವನ್ನು ನಡೆಸುತ್ತಾರೆ. ಉಭಯ ನಗರದ ನಡುವೆ ರೈಲಿನಲ್ಲಿ ಪ್ರಯಾಣಿಸುವ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಬೆಂಗಳೂರು-ತುಮಕೂರು ರೈಲು ಪ್ರಯಾಣಿಕರ ವೇದಿಕೆಯನ್ನು ಸ್ಥಾಪನೆ ಮಾಡಲಾಗಿದೆ.
ವೇದಿಕೆಯ ಸಭೆಯಲ್ಲಿ ಹಲವಾರು ವಿಚಾರಗಳ ಕುರಿತು ಚರ್ಚೆಗಳು ನಡೆದಿವೆ. ಜನವರಿ 1,2026 ರಿಂದ ಕೆಲವು ರೈಲುಗಳ ಸಂಚಾರ ಸಮಯದಲ್ಲಿ ಆಗಿರುವ ಬದಲಾವಣೆಗಳಾಗಿದ್ದು ಇದರಿಂದ ನಿತ್ಯ ಉದ್ಯೋಗಕ್ಕಾಗಿ ತೆರಳುವ ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಲು ರೈಲು ಪ್ರಯಾಣಿಕರೊಂದಿಗೆ ಸಭೆ ನಡೆಸಿ ಚರ್ಚಿಸಿ ಮಾಹಿತಿ ಪಡೆಯಲಾಗಿದೆ.
ಈ ಸಭೆಯಲ್ಲಿ ವ್ಯಕ್ತವಾದ ವಿಷಯಗಳಲ್ಲಿ ಗೋಲಗುಂಬಜ್ ಸಮಯದಲ್ಲಿ ಆಗಿರುವ ಬದಲಾವಣೆಯಿಂದ ಹೆಚ್ಚು ತೊಂದರೆಯಾಗುತ್ತಿದೆ. ಇದರಿಂದ ಆ ರೈಲನ್ನು ಆಶ್ರಯಿಸಿರುವ ಸುಮಾರು 1 ಸಾವಿರಕ್ಕೂ ಹೆಚ್ಚು ಪ್ರಯಾಣಿಕರಿಗೆ ಆಗುತ್ತಿರುವ ತೊಂದರೆ ನಿವಾರಣೆಗೆ ಪ್ರಯತ್ನಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಆ ರೈಲಿನಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರಿಂದ ಸಹಿ ಸಂಗ್ರಹಿಸಿ ಕೊಡಬೇಕೆಂದು ಪ್ರಯಾಣಿಕ ಪ್ರತಿನಿಧಿಗಳಲ್ಲಿ ಮನವಿ ಮಾಡಲಾಯಿತು, ಅದಕ್ಕೆ ಪ್ರಯಾಣಿಕರು ಒಪ್ಪಿಕೊಂಡರು.
ಹೊಸ ರೈಲು ಆರಂಭಕ್ಕೆ ಮನವಿ: ಬೆಳಗ್ಗೆ 6.30ರ ವೇಳೆಗೆ ತುಮಕೂರಿನಿಂದ ಬೆಂಗಳೂರು/ ಯಶವಂತಪುರಕ್ಕೆ ಹೊಸ ಮೆಮು ರೈಲು ಸಂಚಾರ ಆರಂಭಿಸಲು ಸಚಿವರಾದ ವಿ. ಸೋಮಣ್ಣ ಅವರಿಗೆ ಮನವಿ ಮಾಡಬೇಕು. ಅಧಿಕಾರಿಗಳೊಂದಿಗೂ ಚರ್ಚಿಸಬೇಕೆಂದು ಸಲಹೆಯೂ ಸಭೆಯಲ್ಲಿ ಕೇಳಿ ಬಂದಿತು.
- ತಿಪಟೂರು-ಅರಸೀಕೆರೆ ಕಡೆಗೆ ಹೋಗುವ ಪ್ರಯಾಣಿಕರು ಕಳೆದ ಬಾರಿ ನಡೆದ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದ ವಿಷಯಗಳನ್ನೇ ಪ್ರಸ್ತಾಪಿಸಿದ್ದರಿಂದ ಆ ಬಗ್ಗೆ ಈಗಾಗಲೇ ಆಗಿರುವ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.
- ಬೆಳಗ್ಗೆ 8 ಗಂಟೆಗೆ ಹೊರಡುವ ಮೆಮು ರೈಲು ಕೆಎಸ್ಆರ್ ಗೆ ಹೋಗುವಂತೆ ಮನವಿ ಮಾಡಬೇಕು. ಅಗತ್ಯವಾದರೆ ಸದರಿ ರೈಲು ಹೊರಡುವ ವೇಳೆಯನ್ನು 10-15 ನಿಮಿಷ ಮುಂಚಿತವಾಗಿ ಹೊರಟು ಯಶವಂತಪುರದಲ್ಲಿ ಕೋಲಾರ ರೈಲಿಗಾದರೂ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡಬೇಕೆಂಬ ಸಲಹೆ ಬಂದಿತು. ಈ ಬಗ್ಗೆ ಅಧಿಕಾರಿಗಳಲ್ಲಿ ಚರ್ಚಿಸುವುದಾಗಿ ಭರವಸೆ ನೀಡಲಾಯಿತು.
- ಅರಸೀಕೆರೆ-ಚನ್ನಪಟ್ಟಣ ಪ್ಯಾಸೆಂಜರ್ ರೈಲನ್ನು ಮೈಸೂರಿಗೆ ವಿಸ್ತರಿಸಬೇಕು. ಇದರಿಂದ ಸಂಜೆ ಆಗುತ್ತಿರುವ ವಿಳಂಬ ತಪ್ಪಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು.
- ಜನಶತಾಬ್ಧಿ ರೈಲಿನಲ್ಲಿ ಪ್ರಯಾಣಿಸಲು ಪೂರಕವಾದ ಪಾಸ್ ನೀಡುವಂತೆ ಮನವಿ ಮಾಡಬೇಕೆಂಬ ಸಲಹೆ ಬಂದಿತು.
ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮಕ್ಕೆ ಮನವಿ ಮಾಡಲು ಮಾನ್ಯ ಸಚಿವರಾದ ವಿ. ಸೋಮಣ್ಣ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಲು ಪ್ರಯಾಣಿಕರೊಂದಿಗೆ ಮಿನಿ ಬಸ್ನಲ್ಲಿ ತೆರಳುವ ಬಗ್ಗೆ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಿತ್ಯ ಸಂಚರಿಸುವ ಉದ್ಯೋಗಿ ಪ್ರಯಾಣಿಕರು ಸಚಿವರ ಭೇಟಿಗೆ ಬರಬೇಕೆಂದು ಮನವಿ ಮಾಡಲಾಯಿತು.
ಬೆಂಗಳೂರು ವಿಭಾಗಕ್ಕೆ ಹೊಸ ಮೆಮು ರೈಲುಗಳು ಸೇರ್ಪಡೆಯಾದಾಗ ತುಮಕೂರು ಕಡೆಗೆ ಓಡಿಸುವ ಭರವಸೆ ನೀಡಿದ್ದು, ಅದರಿಂದ ತುಮಕೂರು-ಅರಸೀಕೆರೆ ಕಡೆಗೆ ಹೋಗುವ ಪ್ರಯಾಣಿಕರ ಹಲವು ಸಮಸ್ಯೆಗಳು ಬಗೆಹರಿಯಲಿವೆ. ಅದಕ್ಕಾಗಿ ಸ್ವಲ್ಪ ದಿನಗಳು ಕಾಯಬೇಕು ಎಂದು ಪ್ರಯಾಣಿಕರಲ್ಲಿ ಮನವಿ ಮಾಡಲಾಯಿತು.
ಬೆಂಗಳೂರು ನಿಲ್ದಾಣದಲ್ಲಿ 11 ಮತ್ತು 12ನೇ ಪ್ಲಾಟ್ ಫಾರಂಗಳ ನಿರ್ಮಾಣವಾಗಲಿದ್ದು ಆ ನಂತರ ಹೆಚ್ಚು ರೈಲುಗಳು ಕೆಎಸ್ಆರ್ ನಿಲ್ದಾಣ ತಲುಪಲು ಅನುಕೂಲವಾಗಲಿದೆ. ಅಲ್ಲಿಯವರೆಗೂ ವ್ಯವಸ್ಥೆಯೊಂದಿಗೆ ಸಹಕರಿಸಬೇಕೆಂದು ವೇದಿಕೆ ಪ್ರಯಾಣಿಕರಲ್ಲಿ ಮನವಿ ಮಾಡಲಾಯಿತು.
ಸಮಸ್ಯೆ ಎದುರಿಸುತ್ತಿದ್ದರೂ ಪ್ರಯಾಣಿಕರೊಂದಿಗೆ ಆ ಬಗ್ಗೆಯೇ ಚರ್ಚಿಸಲು ಕರೆಯಲಾಗಿದ್ದ ಸಭೆಗೆ ಹಾಜರಾಗಿದ್ದು ಮಾತ್ರ 26 ಜನ. ವೇದಿಕೆ ಏನು ಮಾಡುತ್ತಿದೆ, ರೈಲಿನಲ್ಲಿ ಪ್ರಯಾಣಿಸುವವರನ್ನೇ ಅಧ್ಯಕ್ಷರನ್ನಾಗಿ ಮಾಡಿ. ಹೀಗೆ ವೇದಿಕೆ ಚಟುವಟಿಕೆಗಳ ಬಗ್ಗೆ ವ್ಯಂಗ್ಯವಾಡಿದ್ದವರೂ ಸೇರಿ ಹೆಚ್ಚಿನ ಪ್ರಯಾಣಿಕರು ಯಾರೂ ಸಭೆಗೆ ಬಂದಿರದಿರುವುದು ಅವರ ಬದ್ಧತೆಯ ದ್ಯೋತಕವಾಗಿದೆ.
ರೈಲು ಪ್ರಯಾಣಿಕರಾಗಿ ಸಾಧ್ಯವಾದಷ್ಟೂ ಅನುಕೂಲ ಮಾಡಿಕೊಡಬೇಕೆಂಬ ಏಕೈಕ ಉದ್ದೇಶದಿಂದ ನಾವೆಲ್ಲ ಕೆಲಸ ಮಾಡುತ್ತಿದ್ದೇವೆಯೇ ಹೊರತು ಯಾರ ಮೆಚ್ಚಿಗೆಗಾಗಿ ಅಲ್ಲ. ವೇದಿಕೆಯ ಕೆಲಸಗಳಿಗೆ ಕೈಜೋಡಿಸದಿದ್ದರೂ ಪರವಾಗಿಲ್ಲ. ನಾಲ್ಕು ಜನರೊಂದಿಗೆ ವೇದಿಕೆಯ ಬಗ್ಗೆ ಲಘುವಾಗಿ ಮಾತನಾಡಬೇಡಿ. ಸಮಸ್ಯೆಗಳ ಬಗ್ಗೆಯೇ ಚರ್ಚಿಸಬೇಕೆಂದು ಕರೆಯಲಾಗಿದ್ದ ವೇದಿಕೆಯ ಸಭೆಯಲ್ಲಿ ಭಾಗವಹಿಸಲು ಆಸಕ್ತಿ ಇಲ್ಲದಿದ್ದ ಮೇಲೆ ವೇದಿಕೆ ಬಗ್ಗೆ ಮಾತನಾಡುವ ಅಧಿಕಾರ ಹೊಂದಿರುವುದಿಲ್ಲ.

