ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇದೀಗ ಟ್ವೀಟ್ ವಾರ್ ಜೋರಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ವಾಕ್ಸಮರ ನಡೆಸಿದ್ದಾರೆ. ಸಿಡಿ ಫ್ಯಾಕ್ಟರಿ ಮಾಲೀಕನ ಮನೆಹಾಳು ಆತ್ಮರತಿ ಬಗ್ಗೆ ರಾಜ್ಯ ಕಾಂಗ್ರೆಸ್ ಮರೆತಿದೆ ಎಂಬ ಜೆಡಿಎಸ್ ಟೀಕೆಗೆ ನಿಮ್ಮದು ಬ್ಲೂ ಬಾಯ್ಸ್ ಪಾರ್ಟಿ ಅನ್ನೋದು ಮರೆತು ಹೋಯ್ತೆ? ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಕಟಕಟಾ… ನಿಮ್ಮದು ಸೆಕ್ಯೂರ್ಡ್ “ಬ್ಲೂ ಬಾಯ್ಸ್” ಪಾರ್ಟಿ ಅನ್ನೋದು ಮರೆತು ಹೋಯ್ತೆ..?! ಅದೂ ಇಷ್ಟು ಬೇಗ..? ಶಾಂತಂ ಪಾಪಂ..!! ಎಂದು ವ್ಯಂಗ್ಯವಾಡಿದೆ.
ನಿಮ್ಮಲ್ಲಿ ಬ್ಲೂ ಫಿಲಂ ನಿರ್ಮಾಪಕರು, ನಿರ್ದೇಶಕರು, ಎಲ್ಲಕ್ಕಿಂತ ಮಿಗಿಲಾಗಿ ಪಾತ್ರಧಾರಿಗಳು ತುಂಬಿ ತುಳುಕುತಿದ್ದಾರೆ. ನಿಮ್ಮ ಹುಡುಗ ನಿರ್ಮಿಸಿ, ನಟಿಸಿದ ‘ಹಾಸನ್ ಬ್ಲೂ’ ಚಿತ್ರ ವರ್ಲ್ಡ್ ಫೇಮಸ್! ಕರ್ನಾಟಕದ ಕೀರ್ತಿ ಪತಾಕೆಯನ್ನು ಹಾಲಿವುಡ್ ವರೆಗೂ ಹಾರಾಡಿಸಿದೆ. ಅವರು ಈಗಲೂ ಜೈಲಲ್ಲಿ “ನೀಲ ಮೇಘ ಶ್ಯಾಮ..” ಹಾಡುತ್ತಿದ್ದಾರೆ.
ನಿಮ್ಮ ಇನ್ನೊಬ್ಬ ಲಿಂಬಿಯ ಬನದ ನಾಯಕರು “ಲಿಂಬೆ ಹಣ್ಣಿನಂತ…” ಹಾಡು ಹೇಳಲು ಹೋಗಿ ಜೈಲಲ್ಲಿ ಮುದ್ದೆ ಮುರಿದು ಬಂದಿದ್ದಾರೆ. ಇನ್ನೊಬ್ಬ “ರಾಧಾ ಮಾಧವ ಮನೋ ವಿಲಾಸ..” ನಾಯಕರು ಜಸ್ಟ್ ಎಸ್ಕೇಪ್ ಆಗಿದ್ದಾರೆ. ನಿಮ್ಮ ನಾಯಕರೇ ನಿರ್ಮಿಸಿ, ನಿರ್ದೇಶಿಸಿ, ನಟಿಸಿ ಸಿನಿಮಾ ತೆಗೆದು ಜಗತ್ತಿಗೆ ತೋರಿಸಿರುವಾಗ ಬೇರೆಯವರಿಗೆ ಟೆಂಟಲ್ಲಿ ತೋರಿಸುವ ಅವಕಾಶವೆಲ್ಲಿದೇ?!
ನಿಜಕ್ಕೂ ನಿಮ್ಮ ಸಿನಿಮಾ ಚನ್ನಾಗಿದೆ. ಅದರ ಮೇಲೆ ಮತ್ತೊಂದು ಕತೆ ಕಟ್ಟಲು ಹೋಗಬೇಡಿ. ಸುಮ್ಮನೇ ಆಕಾಶಕ್ಕೆ ಉಗುಳಿ ಮುಖಕ್ಕೆ ಸಿಂಪಡಿಸಿಕೊಳ್ಳಬೇಡಿಎಂದು ಕುಟುಕಿದೆ. ಒಟ್ಟಾರೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ಮಾತನ ಸಮರ ತಾರಕಕ್ಕೇರಿದೆ.

