ಬೆಂಗಳೂರು : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (𝐊𝐑𝐄𝐈𝐒) / ಏಕಲವ್ಯ ಮಾದರಿ ವಸತಿ ಶಾಲೆ (𝐄𝐌𝐑𝐒) ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25-01-2026 ಆಗಿದ್ದು, 01-03-2026 ರಂದು ಪರೀಕ್ಷೆ ನಡೆಯಲಿದೆ. ದಿನಾಂಕ 22-12-2025 ರಂತೆ 2026-27ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಆಗತ್ಯವಾದ ಪ್ರವೇಶ ಪರೀಕ್ಷೆ ಮತ್ತು ಆನ್‌ಲೈನ್ ಕೌನ್ಸಿಲಿಂಗ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸಲಾಗುವುದು. 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳ ಮತ್ತು ಪೋಷಕರ ಅನುಕೂಲಕ್ಕಾಗಿ ಪ್ರಾಧಿಕಾರದ ವೆಬ್‌ಸೈಟಿನಲ್ಲಿ ಘೋಷಣಾ ಪತ್ರವನ್ನು ಪ್ರಚುರ ಪಡಿಸಲಾಗಿದೆ.
ಅಭ್ಯರ್ಥಿಗಳು / ಪೋಷಕರು ತಮ್ಮ ಮಕ್ಕಳನ್ನು 6ನೇ ತರಗತಿಗೆ ವಸತಿ ಶಾಲೆಗಳಿಗೆ ದಾಖಲಿಸಲು, ದಿನಾಂಕ 10-01-2026 ರಿಂದ ಪ್ರಾಧಿಕಾರದ ವೆಬ್ ಸೈಟಿನಿಂದ ಘೋಷಣಾ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿ 25-01-2026 ಸಂಜೆ 4.00 ರೊಳಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ವಸತಿ ಶಾಲೆಗಳಿಗೆ ಸಲ್ಲಿಸಿ ಸ್ವೀಕೃತಿ ಪಡೆಯಲು ಸೂಚಿಸಿದೆ.
6ನೇ ತರಗತಿಗೆ ವಸತಿ ಶಾಲೆಗಳಿಗೆ ದಾಖಲಿಸಲು, ಅರ್ಜಿ ಸಲ್ಲಿಸುವ ವಿಧಾನ, ಹಾಗೂ “ಮಾಹಿತಿ ಪುಸ್ತಕ-2026” ವನ್ನು https://cetonline.karnataka.gov.in/kea/kreis2026 ವೆಬ್ ಸೈಟ್ http://kreis.karnataka.gov.in ನಲ್ಲಿ ಪಡೆಯಬಹುದು. ಪರೀಕ್ಷೆಗೆ ಪ್ರವೇಶ ಪತ್ರಗಳನ್ನು ದಿನಾಂಕ 18-02-2026 ರಿಂದ ಈ ಮೇಲ್ಕಂಡ ವೆಬ್‌ಸೈಟ್ಗಳಿಂದ ಆಯಾ ವಸತಿ ಶಾಲೆಯಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.
ಗಮನಿಸಿ: ಅಭ್ಯರ್ಥಿಯು ಈಗಾಗಲೇ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲೆಯಿಂದ SATS ಸಂಖ್ಯೆ, ಇತ್ತೀಚಿನ ಭಾವಚಿತ್ರ ಮತ್ತು ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳನ್ನು ಅಥವಾ ಜೆರಾಕ್ಸ್ ಪ್ರತಿಗಳನ್ನು ತೆಗೆದುಕೊಂಡು ಅರ್ಜಿ ಸಲ್ಲಿಸುವ ಸಮಯದಲ್ಲಿ ಸಂಬಂಧಿಸಿದ ವಸತಿ ಶಾಲೆ / ಕಾಲೇಜಿನ ಮುಖ್ಯಸ್ಥರನ್ನು ಸಂಪರ್ಕಿಸಬೇಕು.
ವಸತಿ ಶಾಲೆಗಳ ಆಯ್ಕೆಯ ಆದ್ಯತಾ ಕ್ರಮದಲ್ಲಿ ನಮೂದಿಸುವ ಕುರಿತು: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿ /ವಿದ್ಯಾರ್ಥಿನಿಯರಿಗೆ ಯಾವ ಶಾಲೆಗಳಲ್ಲಿ ದಾಖಲಾತಿ ಬಯಸುತ್ತಾರೋ, ಅಂತಹ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಆದ್ಯತಾ ಕ್ರಮದಲ್ಲಿ ದಾಖಲಿಸುವ ಶಾಲೆಗಳನ್ನು ಮಾತ್ರ ಹಂಚಿಕೆಗೆ ಪರಿಗಣಿಸಲಾಗುವುದು. ಅಭ್ಯರ್ಥಿಗಳು ತಮ್ಮ ಸೀಟು ಹಂಚಿಕೆ ಅವಕಾಶವನ್ನು ಹೆಚ್ಚಿಸಿಕೊಳ್ಳಲು ತಮ್ಮ ಜಿಲ್ಲೆಯಲ್ಲಿರುವ KREIS ನ ಎಲ್ಲಾ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ನಮೂದಿಸತಕ್ಕದು. ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಮೆರಿಟ್, ಮೀಸಲಾತಿ ಹಾಗೂ ಅಭ್ಯರ್ಥಿಗಳು ಪ್ರವೇಶಾತಿಗಾಗಿ ನಮೂದಿಸಿರುವ ಶಾಲೆಗಳ ಆದ್ಯತಾ ಕ್ರಮದ ಆಧಾರದ ಮೇಲೆ Computerized Auto Selection ಮೂಲಕ ಸೀಟು ಹಂಚಿಕೆಯನ್ನು ಮಾಡಲಾಗುವುದು.


