ಹಾಸನ: ಭೂ ಪರಿಹಾರ ನೀಡದ ಹಾಸನ ಜಿಲ್ಲಾಧಿಕಾರಿಗೆ ಕೋರ್ಟ್ ಬಿಗ್ ಶಾಕ್ ನೀಡಿದೆ. ಡಿಸಿ ಕಾರು ಜಪ್ತಿ ಮಾಡುವಂತೆ ಕೋರ್ಟ್ ಆದೇಶ ನೀಡಿದೆ.
ಕೋರ್ಟ್ ಆದೇಶದ ಬೆನ್ನಲ್ಲೇ ಅಧಿಕಾರಿಗಳು ಹಾಗೂ ವಕೀಲರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಕಾರು ಜಪ್ತಿ ಮಾಡಿದ್ದು, ಡಿಸಿ ಕಚೇರಿ ಸಿಬ್ಬಂದಿಗಳು ಪೇಚಿಗೆ ಸಿಲುಕಿದ್ದಾರೆ.
ಯಗಚಿ ನಾಲೆಗಾಗಿ ಸುಮಾರು 20 ವರ್ಷಗಳ ಹಿಂದೆ ಭೂಮಿ ಕಳೆದುಕೊಂಡಿದ್ದ ರೈತರು ಸೂಕ್ತ ಪರಿಹಾರ ನೀಡಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ನಾಗಮ್ಮ, ಲಕ್ಷ್ಮೇ ಗೌಡ, ಜಗದೀಶ್ ಎಂಬುವವರು 11ಲಕ್ಷದ 22 ಸಾವಿರ ಪರಿಹಾರ ಮೊತ್ತ ಬಾಕಿ ಇದೆ ಎಂದು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಎರಡು ವರ್ಷಗಳ ಹಿಂದೆಯೇ ಪೂರ್ಣ ಪರಿಹಾರ ಪಾವತಿಸುವಂತೆ ಕೋರ್ಟ್ ಜಿಲ್ಲಾಧಿಕಾರಿಗೆ ಆದೇಶ ನೀಡಿತ್ತು. ಗುಂಟೆಗೆ 40 ಸಾವಿರದಂತೆ 10.5 ಗುಂಟೆಗೆ ನಿಗದಿಯಾಗಿದ್ದ ಪರಿಹಾರ ನೀಡಲು ಸೂಚಿಸಿತ್ತು. ಆದರೆ ಜಿಲ್ಲಾಧಿಕಾರಿ ಈವರೆಗೂ ಪರಿಹಾರ ನೀಡಿರಲಿಲ್ಲ. ಕೋರ್ಟ್ ಆದೇಶ ಉಲ್ಲಂಘನೆ ಬೆನ್ನಲ್ಲೇ ಇದೀಗ ನ್ಯಾಯಾಲಯ ಜಿಲ್ಲಾಧಿಕಾರಿ ಕಾರು ಜಪ್ತಿ ಮಾಡುವಂತೆ ಸೂಚಿಸಿದೆ.

