HomeKarnatakaರಾಜ್ಯ ರಾಜಕೀಯಕ್ಕೆ ಪ್ರತಾಪ್ ಸಿಂಹ: ಹೇಗಿದೆ ಚಾಮರಾಜ ಕ್ಷೇತ್ರದ ಚಿತ್ರಣ?

ರಾಜ್ಯ ರಾಜಕೀಯಕ್ಕೆ ಪ್ರತಾಪ್ ಸಿಂಹ: ಹೇಗಿದೆ ಚಾಮರಾಜ ಕ್ಷೇತ್ರದ ಚಿತ್ರಣ?

ಮಾಜಿ ಸಂಸದ, ಬಿಜೆಪಿ ನಾಯಕ ಪ್ರತಾಪ್ ಸಿಂಹ ಅವರಿಗೆ 2024ರ ಲೋಕಸಭೆ ಚುನಾವಣೆಯ ಟಿಕೆಟ್ ಮಿಸ್ ಆಯಿತು ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಯದುವೀರ್ ಒಡೆಯರ್ ಪಾಲಾಯಿತು, ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದರು.

2014, 2019ರಲ್ಲಿ ಎರಡು ಬಾರಿ ಮೈಸೂರು-ಕೊಡಗು ಪ್ರತಿನಿಧಿಸಿದ್ದ ಪ್ರತಾಪ್ ಸಿಂಹ ರಾಜಕೀಯ ಭವಿಷ್ಯ ಏನು? ಎಂಬ ಚರ್ಚೆ ನಡೆಯುತ್ತಿದೆ. ಇಂತಹ ಹೊತ್ತಿನಲ್ಲಿ ರಾಜ್ಯ ರಾಜಕೀಯದಲ್ಲಿ ಮುಂದುವರೆಯುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

“ಸಹಜವಾಗಿಯೇ ನಾನು ರಾಜ್ಯ ರಾಜಕೀಯಕ್ಕೆ ಬಂದಿದ್ದೇನೆ. ಕೇಂದ್ರ ರಾಜಕಾರಣ ಮುಗಿದ ಮೇಲೆ ರಾಜ್ಯಕ್ಕೆ ಬರಲೇಬೇಕು ತಾನೇ?” ಎಂದು ಮೈಸೂರಿನಲ್ಲಿ ಸೋಮವಾರ ಪ್ರತಾಪ್ ಸಿಂಹ ಮಾತನಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೈಸೂರು ನಗರದ ಕ್ಷೇತ್ರದಿಂದ ಮುಂದಿನ ವಿಧಾನಸಭೆ ಚುನಾವಣೆಗೆ ನಿಲ್ಲುವ ತಯಾರಿಯಲ್ಲಿದ್ದಾರೆ. ಹಾಗಾದರೆ ಪ್ರತಾಪ್ ಸಿಂಹ ಟಿಕೆಟ್ ಬಯಸಿರುವ ಕ್ಷೇತ್ರ, ಅಲ್ಲಿನ ಹಿಂದಿನ ಚುನಾವಣೆಗಳ ಚಿತ್ರಣ ಇಲ್ಲಿದೆ.

ಚಾಮರಾಜ ಕ್ಷೇತ್ರ: ಮೈಸೂರು ನಗರದ ವಿಧಾನಸಭಾ ಕ್ಷೇತ್ರಗಳಲ್ಲಿ ಚಾಮರಾಜ ಸಹ ಒಂದು. ಈ ಕ್ಷೇತ್ರದಿಂದಲೇ ಪ್ರತಾಪ್ ಸಿಂಹ ಟಿಕೆಟ್ ಬಯಸಿದ್ದಾರೆ. “ಎಲ್ಲಾ ದೃಷ್ಟಿಯಿಂದಲೂ ಚಾಮರಾಜ ವಿಧಾನಸಭಾ ಕ್ಷೇತ್ರ ನನಗೆ ಅನುಕೂಲಕರವಾಗಿದೆ. ಹೀಗಾಗಿ ಇದೇ ನನ್ನ ಆಯ್ಕೆಯಾಗಿರುತ್ತದೆ. ಈ ಹಿಂದೆ ಎಚ್.ಎಸ್.ಶಂಕರಲಿಂಗೇಗೌಡ ಅವರು 4 ಬಾರಿ ಕ್ಷೇತ್ರದಿಂದ ಬಿಜೆಪಿಯಿಂದ ಗೆದ್ದಿದ್ದರು” ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

“ಇದು ಬಿಜೆಪಿ ಕ್ಷೇತ್ರ ಹೀಗಾಗಿ ಇಲ್ಲಿಂದಲೇ ಚಟುವಟಿಕೆ ಆರಂಭಿಸಿದ್ದೇನೆ. ಚಾಮರಾಜ ಹಣ, ಪ್ಯಾಕೇಜ್ ಕೊಟ್ಟು ಗೆಲ್ಲುವ ಕ್ಷೇತ್ರವಲ್ಲ. ಇಲ್ಲಿನ ಮತದಾರರು ಕೆಲಸ ನೋಡಿ ಪ್ರೀತಿ ತೋರಿಸುತ್ತಾರೆ. ಇಲ್ಲಿ ಎಲ್ಲಾ ವರ್ಗದ ಜನರು ಇದ್ದಾರೆ. ಆದ್ದರಿಂದ ಆಯ್ಕೆ ಮಾಡಿಕೊಂಡಿದ್ದೇನೆ” ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಚಾಮರಾಜ ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್‌ನ ಕೆ.ಹರೀಶ್ ಗೌಡ. 2023ರ ಚುನಾವಣೆಯಲ್ಲಿ ಅವರು 72,931 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಎದುರಾಳಿಯಾಗಿದ್ದ ಬಿಜೆಪಿ ಅಭ್ಯರ್ಥಿ ಎಲ್. ನಾಗೇಂದ್ರ 68,837 ಮತಗಳನ್ನು ಪಡೆದು ಸೋಲು ಕಂಡಿದ್ದರು.

2018ರ ಚುನಾವಣೆಯಲ್ಲಿ ಕ್ಷೇತ್ರ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿತ್ತು. ಬಿಜೆಪಿಯ ಎಲ್. ನಾಗೇಂದ್ರ 51,683 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಎಲ್‌. ವಾಸು ಎದುರಾಳಿಯಾಗಿದ್ದರು ಅವರು ಪಡೆದ ಮತಗಳು 36,747  ಮತ್ತು ಜೆಡಿಎಸ್‌ ಅಭ್ಯರ್ಥಿ ಕೆ.ಎಸ್.ರಂಗಪ್ಪ 27,284 ಮತಗಳನ್ನು ಪಡೆದು 3ನೇ ಸ್ಥಾನ ಪಡೆದಿದ್ದರು.

2013ರಲ್ಲಿ ಕಾಂಗ್ರೆಸ್‌ನ ಎಲ್‌.ವಾಸು 41,930 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಶಂಕರಲಿಂಗೇ ಗೌಡರು ಜೆಡಿಎಸ್‌ನಿಂದ ಕಣಕ್ಕಿಳಿದು 29,015 ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿಯಾಗಿದ್ದ ನಾಗೇಂದ್ರ 26,168 ಮತಗಳನ್ನು ಪಡೆದು ಸೋಲು ಕಂಡಿದ್ದರು.

2008ರ ಚುನಾವಣೆಯಲ್ಲಿ ಬಿಜೆಪಿಯ ಎಚ್.ಎಸ್.ಶಂಕರಲಿಂಗೇ ಗೌಡ 44,243 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಎದುರಾಳಿಯಾಗಿದ್ದ ಕಾಂಗ್ರೆಸ್‌ನ ವಾಸು 34,844 ಮತಗಳನ್ನು ಪಡೆದು ಸೋಲು ಕಂಡಿದ್ದರು.

ಕ್ಷೇತ್ರದ ಕುರಿತು: ಚಾಮರಾಜ ವಿದ್ಯಾವಂತ ಮತ್ತು ಒಕ್ಕಲಿಗರಿಂದ ಕೂಡಿರುವ ಕ್ಷೇತ್ರ. ಮೂರು ಪಕ್ಷಗಳು ಸಮಾನ ಬಲಾಬಲವನ್ನು ಕ್ಷೇತ್ರದಲ್ಲಿ ಹೊಂದಿವೆ. ಆದರೆ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಬಿಜೆಪಿ ಅತಿ ಹೆಚ್ಚು ಬಾರಿ ಗೆಲುವು ಸಾಧಿಸಿದೆ. ಒಕ್ಕಲಿಗರ ಪ್ರಾಬಲ್ಯ ಹೆಚ್ಚಿರುವ ಕ್ಷೇತ್ರವಿದರು. ಕ್ಷೇತ್ರದಲ್ಲಿ ಇದುವರೆಗೆ ಸ್ಪರ್ಧಿಸಿರುವವರೆಲ್ಲಾ ಬಹುತೇಕ ಒಕ್ಕಲಿಗರೇ ಆಗಿದ್ದು, ಶಾಸಕರಾಗಿ ಆಯ್ಕೆ ಆದವರೆಲ್ಲರೂ ಒಕ್ಕಲಿಗರೇ ಆಗಿದ್ದಾರೆ.

ಆದ್ದರಿಂದ ಒಕ್ಕಲಿಗರಾಗಿರುವ ಪ್ರತಾಪ್ ಸಿಂಹ ಕ್ಷೇತ್ರದ ಟಿಕೆಟ್ ಬಯಸಿದ್ದಾರೆ. 1978ರಿಂದ ಇಲ್ಲಿಯ ತನಕ ಕ್ಷೇತ್ರ ಒಟ್ಟು 11 ಚುನಾವಣೆಗಳನ್ನು ಎದುರಿಸಿದೆ. ಶಂಕರಲಿಂಗೇಗೌಡ ಸತತ 4 ಬಾರಿ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ. ಆದರೆ ಕ್ಷೇತ್ರದಿಂದ ಆಯ್ಕೆಯಾದ ಶಾಸಕರು ಸಚಿವರಾಗಿಲ್ಲ.

2013 ಹಾಗೂ 2018ರ ಚುನಾವಣೆಗಳಲ್ಲೂ ಚಾಮರಾಜ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ 2013ರಲ್ಲಿ ಜೆಡಿಎಸ್​ ಎಚ್​.ಎಸ್. ಶಂಕರಲಿಂಗೇ ಗೌಡರಿಗೆ ಟಿಕೆಟ್ ನೀಡಿತ್ತು. 2018ರಲ್ಲಿ ಎಚ್​.ಡಿ. ದೇವೇಗೌಡರ ಸಂಬಂಧಿ ಎಂಬ ಕಾರಣಕ್ಕೆ ಪ್ರೊ. ಕೆ.ಎಸ್. ರಂಗಪ್ಪಗೆ ಜೆಡಿಎಸ್ ಟಿಕೆಟ್ ನೀಡಿತ್ತು. ಆಗ ಕೆ. ಹರೀಶ್‌ ಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು, ಸೋತಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular