HomeLatest Newsಪ್ರತಿ ವರ್ಷ 5 ಕೋಟಿ ಸಸಿ ನೆಟ್ಟು ಕಾಡು ಹೆಚ್ಚಳ, ಎಲ್ಲಾ ಜಿಲ್ಲೆಯಲ್ಲೂ ಸಾಧಕರ ವಸ್ತುಸಂಗ್ರಹಾಲಯ...

ಪ್ರತಿ ವರ್ಷ 5 ಕೋಟಿ ಸಸಿ ನೆಟ್ಟು ಕಾಡು ಹೆಚ್ಚಳ, ಎಲ್ಲಾ ಜಿಲ್ಲೆಯಲ್ಲೂ ಸಾಧಕರ ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ಚಿಂತನೆ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿಯಾಗಿ 8ನೇ ಬಾರಿಗೆ ಚಿತ್ರ ಸಂತೆಯಲ್ಲಿ ಭಾಗವಹಿಸುತ್ತಿದ್ದೇನೆ ಎನ್ನುವುದು ಖುಷಿಯ ವಿಚಾರ. ಕಲಾವಿದರನ್ನು ಪ್ರೋತ್ಸಾಹಿಸುವುದು, ಅವರ ಚಿತ್ರಗಳ ಪ್ರದರ್ಶನ ಹಾಗೂ ಅವುಗಳ ಮಾರಾಟಕ್ಕೆ ವೇದಿಕೆ ಸೃಷ್ಟಿ ಮಾಡುವ ಕೆಲಸವನ್ನು ಚಿತ್ರಕಲಾ ಪರಿಷತ್ತು ಅರವತ್ತು ವರ್ಷಗಳಿಂದ ಮಾಡುತ್ತಾ ಬಂದಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ಆವರಣದಲ್ಲಿ ಇಂದು ಆಯೋಜಿಸಿದ್ದ ಚಿತ್ರಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಚಿತ್ರಸಂತೆ ತನ್ನ 23ನೇ ವರ್ಷಕ್ಕೆ ಕಾಲಿಟ್ಟಿದೆ. ಸುಮಾರು 22 ರಾಜ್ಯಗಳು, ನಾಲ್ಕು ಕೇಂದ್ರಾಡಳಿತ ಪ್ರದೇಶಗಳ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದರು.

ಪ್ರತಿ ಜಿಲ್ಲೆಯಲ್ಲಿಯೂ ಸಾಧಕರ ವಸ್ತುಸಂಗ್ರಹಾಲಯಕ್ಕೆ ಬೇಡಿಕೆಯಿದ್ದು, ಸರ್ಕಾರ ಅದನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡಲಿದೆ. ಈ ಬಾರಿಯ ಚಿತ್ರಸಂತೆಯ ಧ್ಯೇಯ ವಾಕ್ಯ ಪರಿಸರಕ್ಕೆ ಸಮರ್ಪಿಸಲಾಗಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಅದಕ್ಕಾಗಿ ಪರಿಸರದ ಬಗ್ಗೆ ಜ್ಞಾನ ಅಗತ್ಯ. ಈ ಕುರಿತು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಂಗಳೂರು ಸೇರಿದಂತೆ ದೇಶದ ಅನೇಕ ರಾಜಧಾನಿಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿದ್ದು, ದೆಹಲಿಯಲ್ಲಿ ಬದುಕಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗುತ್ತಿದೆ. ಪರಿಸರದ ರಕ್ಷಣೆ ಇಂದಿನ ಅಗತ್ಯವಾಗಿದೆ ಎಂದರು. 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿ ವರ್ಷ ಮೂರರಿಂದ ಐದು ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಯಾವುದೇ ಪ್ರದೇಶದಲ್ಲಿ ಶೇ.  30ರಷ್ಟು ಕಾಡು ಇರಬೇಕು. ನಮ್ಮಲ್ಲಿ ಶೇಕಡ 20ರಷ್ಟು ಅರಣ್ಯ ಪ್ರದೇಶವಿದೆ. ಇದನ್ನು ಹೆಚ್ಚು ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು. ಸಾಲು ಮರದ ತಿಮ್ಮಕ್ಕನವರಂತೆ ಸಾರ್ವಜನಿಕರು ಗಿಡಗಳನ್ನು ನೆಡಬೇಕು. ಮಕ್ಕಳನ್ನು ಸಾಕಿದಂತೆ ಗಿಡಮರಗಳನ್ನು ಅವರು ಸಾಕಿದ್ದ ಕಾರಣ ಹಲವು ಪ್ರಶಸ್ತಿಗಳು ದೊರೆಯಿತು. ಅವರ ಆತ್ಮಕ್ಕೆ ಶಾಂತಿ ದೊರಕಬೇಕಾದರೆ ನಾವೆಲ್ಲರೂ ಗಿಡ ಬೆಳೆಸುವ ಪ್ರಯತ್ನವನ್ನು ಮಾಡಬೇಕು. ಪರಿಸರ ರಕ್ಷಣೆಗಾಗಿ ಹೋರಾಟವನ್ನೇ ಕೈಗೊಂಡ ಅನೇಕರು ನಮ್ಮ ನಡುವೆಯೇ ಇದ್ದಾರೆ. ಗಿಡ ನೆಡಲು ಬಹಳ ಖರ್ಚು ಆಗುವುದಿಲ್ಲ. ಮನಸ್ಸು ಮಾಡಬೇಕಷ್ಟೆ. ಸರ್ಕಾರ ಕೂಡ ಈ ದಿಕ್ಕಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿದೆ ಎಂದರು.

ನಾಡಿನ ವಿವಿಧ ಕಲಾವಿದರ ಕೈಗಳಲ್ಲಿ ಅರಳಿರುವ ವರ್ಣಚಿತ್ರಗಳು, ಕಲಾಕೃತಿಗಳು ಅತ್ಯಂತ ಸೊಗಸಾಗಿವೆ. ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರಿನಂತಹ ವಾಣಿಜ್ಯ ನಗರದಲ್ಲಿ ಪ್ರತೀ ವರ್ಷ ಇಂತದ್ದೊಂದು ಸುಂದರ ಕಾರ್ಯಕ್ರಮವನ್ನು ಆಯೋಜಿಸುತ್ತ, ಕರಕುಶಲಕರ್ಮಿಗಳು, ವರ್ಣಚಿತ್ರಕಾರರ ವೈವಿದ್ಯಮಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular