ಮೈಸೂರು: ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಎಸ್.ಎ. ರಾಮದಾಸ್ ಚುನಾವಣಾ ರಾಜಕೀಯಕ್ಕೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
ಮೈಸೂರಿನಲ್ಲಿ 32 ವರ್ಷ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಎಸ್.ಎ. ರಾಮದಾಸ್ ಚುನಾವಣಾ ರಾಜಕೀಯದಿಂದ ನಿವೃತ್ತರಾಗುವುದಾಗಿ ಹೇಳಿದ್ದು, ಬಿಜೆಪಿಯನ್ನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮೈಸೂರು ನಗರ ಪತ್ರಿಕಾ ವಿತರಕರ ಸಂಘದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಮದಾಸ್, ಸುತ್ತೂರು ಶ್ರೀಗಳು ಸೇರಿದಂತೆ ನನ್ನನ್ನು ಹತ್ತಿರದಿಂದ ಬಲ್ಲವರು ಮತ್ತೆ ಸಕ್ರಿಯವಾಗಿ ಸಮಾಜದೊಂದಿಗೆ ಇರುವಂತೆ ಹೇಳುತ್ತಿದ್ದಾರೆ. ನಾನು ಚುನಾವಣಾ ರಾಜಕೀಯ ಮಾಡುವುದಿಲ್ಲ. ಪರಿಸರ ಉಳಿಸುವ ನಿಟ್ಟಿನಲ್ಲಿ ಸಮಾಜ ಸೇವೆ ಮುಂದುವರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ರೋಗ ಬಂದಾಗ ಚಿಕಿತ್ಸೆ ಪಡೆಯುವುದು ಬೇರೆ, ಕಾಯಿಲೆ ಬರದಂತೆ ಪರಿಸರ ಉಳಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಚಿಂತನೆ, ಅಧ್ಯಯನ ನಡೆಸುತ್ತಿದ್ದು, ಪರಿಸರ ಸಂರಕ್ಷಣಾ ಕಾರ್ಯದ ಮೂಲಕ ಸಾಮಾಜಿಕವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ನನ್ನ ಕುಟುಂಬದಲ್ಲಿ ಉದ್ಯಮಿಗಳಿದ್ದಾರೆ, ಅವರ ಬಳಿ ಇರುವ ಆಸ್ತಿ ನನ್ನದಲ್ಲ. ನನಗೆ ಬರುವ ನಿವೃತ್ತಿ ವೇತನ ನನ್ನ ಜೀವನ ನಡೆಸಲು ಸಾಕು. ಶ್ರೀರಾಮನಿಗೆ ಪಟ್ಟಾಭಿಷೇಕ ನಡೆಯುವ ಹಿಂದಿನ ದಿನದ ರಾತ್ರಿ ಕಾಡಿಗೆ ಹೋಗುವಂತೆ ಹೇಳಲಾಯಿತು. ಅಂತಹ ಶ್ರೀರಾಮಚಂದ್ರನೇ ಕಾಡಿಗೆ ಹೊರಟುಹೋದ. ನಾನು ರಾಮದಾಸ. ನಾನು ಬಿಜೆಪಿ ಬಿಡುವುದಿಲ್ಲ. ತಾಯಿಗೆ ದ್ರೋಹ ಮಾಡುವುದಿಲ್ಲ ಎಂದು ಅನೇಕ ಬಾರಿ ಹೇಳಿದ್ದೇನೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ನನ್ನ ತಂದೆ ಮಾಜಿ ಸೈನಿಕರಾಗಿದ್ದು, ನಾನು ಕೂಡ ಸೇನೆಗೆ ಸೇರಬೇಕೆಂದುಕೊಂಡಿದ್ದೆ. 1994 ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಗೆದ್ದು ಬಂದಾಗ ರಾಜಕೀಯ ತುಂಬಾ ಕೆಟ್ಟದ್ದು. ಶುದ್ಧವಾಗಿರಬೇಕು ಎಂದು ತಂದೆ, ತಾಯಿ ಹೇಳಿದ್ದರು. ಅಂತೆಯೇ ನಾನು ಕಾರ್ಯನಿರ್ವಹಿಸಿದ್ದೇನೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಮೈಸೂರಿಗೆ ಬಂದಿದ್ದ ಪ್ರಧಾನಿ ಮೋದಿ ಅವರು ರಾಮದಾಸ್ ಅವರ ಬೆನ್ನಿಗೆ ಗುದ್ದಿ ಆತ್ಮೀಯವಾಗಿ ಮಾತನಾಡಿಸಿದ್ದು ಗಮನಸೆಳೆದಿತ್ತು.

