ಬಳ್ಳಾರಿ ರಾಜಕೀಯ ಮತ್ತೆ ಕರ್ನಾಟಕದಲ್ಲಿ ಸದ್ದು ಮಾಡಿದೆ. ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವೆ ಗಲಾಟೆ ನಡೆದಿದೆ. ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಬಲಿಯಾಗಿದ್ದಾನೆ.
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು ಎದುರುಹಾಕಿಕೊಂಡು ರಾಜಕೀಯ ಮಾಡುತ್ತಿರುವ ಯುವ ನಾಯಕ ನಾರಾ ಭರತ್ ರೆಡ್ಡಿ. 36 ವರ್ಷದ ನಾಯಕ ಬಳ್ಳಾರಿಯಲ್ಲಿ ರೆಡ್ಡಿ V/S ರೆಡ್ಡಿ ರಾಜಕೀಯದ ಮೂಲಕ ಗಮನ ಸೆಳೆದಿದ್ದಾರೆ.
ರೆಡ್ಡಿ ಕುಟುಂಬಕ್ಕೆ ಸೋಲು: 2023ರ ವಿಧಾನಸಭೆ ಚುನಾವಣೆಯ ಸಮಯದಿಂದಲೇ ಜನಾರ್ದನ ರೆಡ್ಡಿ, ಅವರ ಕುಟುಂಬ ಮತ್ತು ನಾರಾ ಭರತ್ ರೆಡ್ಡಿ ನಡುವೆ ಜಟಾಪಟಿ ನಡೆಯುತ್ತಿದೆ. ಇದು ಬಳ್ಳಾರಿ ರಾಜಕೀಯದ ಪಾರ್ಟ್-2 ಎಂದೇ ಸ್ಥಳೀಯರು ಹೇಳುತ್ತಿದ್ದಾರೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದ ನಾರಾ ಭರತ್ ರೆಡ್ಡಿ 86,440 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಎದುರಾಳಿಯಾಗಿದ್ದು ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಮತ್ತು ಸಹೋದರ ಸೋಮಶೇಖರ ರೆಡ್ಡಿ.
ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಅರುಣಾ ಲಕ್ಷ್ಮಿ 48,577 ಮತ್ತು ಬಿಜೆಪಿ ಅಭ್ಯರ್ಥಿಯಾಗಿದ್ದ ಜಿ.ಸೋಮಶೇಖರ ರೆಡ್ಡಿ 37,155 ಮತಗಳನ್ನು ಪಡೆದು ನಾರಾ ಭರತ್ ರೆಡ್ಡಿ ವಿರುದ್ಧ ಸೋತರು.
ಆಗ ಬಿಜೆಪಿ ವಿರುದ್ಧ ತೊಡೆತಟ್ಟಿ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿದ್ದರು. ಬಳ್ಳಾರಿಗೆ ಅವರು ಭೇಟಿ ನೀಡಲು ಸುಪ್ರೀಂಕೋರ್ಟ್ ಒಪ್ಪಿಗೆ ಬೇಕಿತ್ತು. ಆದ ಕಾರಣ ಬಳ್ಳಾರಿ ಬಿಟ್ಟು ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಚುನಾವಣೆಗೆ ನಿಂತರು, ಗೆದ್ದರು. ಅಲ್ಲೇ ವಾಸ್ತವ್ಯ ಹೂಡಿದರು.
ಈಗ ರಾಜಕೀಯ ಚಿತ್ರಣ ಬದಲಾಗಿದೆ. ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿದ್ದಾರೆ. ಅವರು ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಲು ಇದ್ದ ನಿರ್ಬಂಧವನ್ನು ಸುಪ್ರೀಂಕೋರ್ಟ್ ಸಡಿಲಗೊಳಿಸಿದೆ. ಆದ್ದರಿಂದ ಜನಾರ್ದನ ರೆಡ್ಡಿ ಮತ್ತು ನಾರಾ ಭರತ್ ರೆಡ್ಡಿ ಜಟಾಪಟಿ ಜೋರಾಗಿದೆ.
91 ಕೋಟಿ ರೂ. ಆಸ್ತಿ ಘೋಷಣೆ: ಚುನಾವಣೆ ವೇಳೆ ಸಲ್ಲಿಕೆ ಮಾಡಿದ್ದ ಅಫಿಡೆವಿಟ್ನಲ್ಲಿ ನಾರಾ ಭರತ್ ರೆಡ್ಡಿ ತಮ್ಮ ಬಳಿ 91.2 ಕೋಟಿ ರೂ. ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಇದರಲ್ಲಿ 24.7 ಕೋಟಿ ಚರ ಮತ್ತು 66.5 ಕೋಟಿ ಸ್ಥಿರ ಆಸ್ತಿ.
ಆದರೆ ವಿಧಾನಸಭೆ ಚುನಾವಣೆ ಮುಗಿದ ಬಳಿ ನಾರಾ ಭರತ್ ರೆಡ್ಡಿ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ಇಡಿ ದಾಳಿಯಾಗಿತ್ತು. ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡ ಇಡಿ ದಾಳಿಯನ್ನು ನಡೆಸಿತ್ತು.
ಬಳ್ಳಾರಿ ಚುನಾವಣೆಗಾಗಿಯೇ ನಾರಾ ಭರತ್ ರೆಡ್ಡಿ 42 ಕೋಟಿ ರೂ. ನಗದು ಹಣ ಸಂಗ್ರಹ ಮಾಡಿದ್ದಾರೆ ಎಂದು ಇಡಿ ಆರೋಪ ಮಾಡಿತ್ತು. ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಅವರ ವ್ಯವಹಾರಗಳನ್ನು ಪರಿಶೀಲನೆ ಮಾಡಲಾಗಿತ್ತು. ದಾಳಿಯ ವೇಳೆ ಇಡಿಗೆ 31 ಲಕ್ಷ ರೂ. ಯಾವುದೇ ದಾಖಲೆ ಇಲ್ಲದ ಹಣ ಸಿಕ್ಕಿತ್ತು.
ಈಗ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಳ್ಳಾರಿಯಲ್ಲಿ ಗಲಾಟೆಯಾಗಿದೆ. ಜನಾರ್ದನ ರೆಡ್ಡಿ ಆಪ್ತ ಗೆಳೆಯ ಬಿ.ಶ್ರೀರಾಮುಲು ವಾಲ್ಮೀಕಿ ಸಮಯದಾಯದ ಪ್ರಬಲ ನಾಯಕ ಜನಾರ್ದನ ರೆಡ್ಡಿ, ಶ್ರೀರಾಮುಲು ಮನೆ ಅಕ್ಕಪಕ್ಕವೇ ಇದೆ. ಆದರೆ ಈಗ ಇವರಿಬ್ಬರನ್ನು ಎದುರು ಹಾಕಿಕೊಂಡು ಭರತ್ ರೆಡ್ಡಿ ರಾಜಕೀಯ ಮಾಡುತ್ತಿದ್ದಾರೆ.

