HomeLatest NewsBIG NEWS : ಕರ್ನಾಟಕದಲ್ಲಿ ಹೊಸ ವರ್ಷಾಚರಣೆ ದಿನ ಸಾಲು ಸಾಲು ಕೊಲೆ ,...

BIG NEWS : ಕರ್ನಾಟಕದಲ್ಲಿ ಹೊಸ ವರ್ಷಾಚರಣೆ ದಿನ ಸಾಲು ಸಾಲು ಕೊಲೆ , ಆತ್ಮಹತ್ಯೆ , ಅಪಘಾತ ಪ್ರಕರಣ.!


ದುನಿಯಾ ಡಿಜಿಟಲ್ ಡೆಸ್ಕ್ : ಕರ್ನಾಟಕದಲ್ಲಿ ಹೊಸ ವರ್ಷಾಚರಣೆ ದಿನ ಸಾಲು ಸಾಲು ಕೊಲೆ, ಆತ್ಮಹತ್ಯೆ, ಅಪಘಾತ ಪ್ರಕರಣಗಳು ನಡೆದಿರುವುದು ವರದಿಯಾಗಿದೆ. ಹೌದು. 2026 ನೇ ವರ್ಷದ ಮೊದಲ ದಿನ ಹಾಗೂ ನಿನ್ನೆ ಹಲವು ಕ್ರೈಮ್ ನಡೆದಿದೆ. ಈ ಕುರಿತು ಇಲ್ಲಿದೆ ವರದಿ.

1) ಪತ್ನಿಯ ಕತ್ತು ಹಿಸುಕಿ ಕೊಲೆ
ಪತ್ನಿ ಮೇಲಿನ ಅನುಮಾನಕ್ಕೆ ಹುಬ್ಬಳ್ಳಿಯಲ್ಲಿ ಪತಿ ಮಹಾಶಯನೊಬ್ಬ ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.ಪತಿ-ಪತ್ನಿ ನಡುವಿನ ಕಲಹ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇತೆಯ ಅಮರಾವತಿ ನಿವಾಸಿ ಸೆಲ್ವಕುಮಾರ್ ಎಂಬಾತ ಪತ್ನಿ ಝಾನ್ಸಿಯನ್ನು ಕೊಲೆಗೈದು ಪರಾರಿಯಾಗಿದ್ದಾನೆ.ಪ್ರಕರಣ ನಡೆದು ಕೇವಲ ನಾಲ್ಕು ಗಂಟೆಯಲ್ಲೇ ಆರೋಪಿ ಸೆಲ್ವಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.

2) ಹುಬ್ಬಳ್ಳಿಯಲ್ಲೂ ಪತ್ನಿ ಕೊಲೆ
ಹುಬ್ಬಳ್ಳಿ: ಹೊಸ ವರ್ಷದ ಸಂಭ್ರಮದ ಹೊತ್ತಲ್ಲೇ ಪತಿ ಮಹಾಶಯನೊಬ್ಬ ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದಿರುವ ದಾರುಣ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಪತಿ ಮೆಹಬೂಬ್ ಪಣಿಬಂದ್ ತನ್ನ ಪತ್ನಿ ಅಂಜುಮಾ ಬಿಲೆಬಾಳ್ ಳನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಮೆಹಬೂಬ್ ಹಾಗೂ ಅಂಜುಮಾ ಇಬರಿಗೂ ಇದು ಎರಡನೇ ಮದುವೆಯಾಗಿತ್ತು. ಮೆಹಬೂಬ್ ಗೆ ಪತ್ನಿ ಅಂಜುಮಾ ಮೇಲೆ ಅನುಮಾನವಿತ್ತಂತೆ.ಪತ್ನಿಗೆ ಅನೈತಿಕ ಸಂಬಂಧವಿರಬಹುದು ಎಂಬ ಶಂಕೆ ಹಿನ್ನೆಲೆಯಲ್ಲಿ ಆಕೆಯನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತಿ ಬಂಧನಕ್ಕೆ ಬಲೆ ಬೀಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

3) ಕಾಲುವೆಗೆ ಜಾರಿ ಬಿದ್ದು ಇಬ್ಬರು ಮಹಿಳೆಯರು ಸಾವು
ರಾಯಚೂರು: ಕಾಲು ಜಾರಿ ಕಾಲುವೆಗೆ ಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಆನೆ ಹೊಸೂರು ಬಳಿ ನಡೆದಿದೆ. ಮಸ್ಕಿ ತಾಲೂಕಿನ ನಂಜಲದಿನ್ನಿ ಗ್ರಾಮದ ಈರಮ್ಮ (35) ಹಾಗೂ ದೇವಮ್ಮ (30) ಮೃತ ದುರ್ದೈವಿಗಳು. ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ಕೈ-ಕಾಲು ತೊಳೆಯಲೆಂದು ಹೋಗಿ ಈ ದುರಂತ ಸಂಭವಿಸಿದೆ.

ಲಿಂಗಸಗೂರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಇಬ್ಬರು ಮಹಿಳೆಯರ ಮೃತದೇಹವನ್ನು ಕಾಲುವೆಯಿಂದ ಹೊರ ತೆಗೆದಿದ್ದಾರೆ. ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

4) ಭೀಕರ ಅಪಘಾತದಲ್ಲಿ ಮೂವರು ಸಾವು

ಗದಗ: ಗೋವಾ ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿರುವ ಘಟನೆ ಗದಗದಲ್ಲಿ ನಡೆದಿದೆ.ಗದಗ ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಕಾರು ಚಾಲಕ ಈರಣ್ಣ ಉಪ್ಪಾರ, ರವಿ ನೆಲ್ಲೂರು, ಅರ್ಜುನ್ ಮೃತ ದುರ್ದೈವಿಗಳು.ಎನ್ ಹೆಚ್ 63ರಲ್ಲಿ ಡಿವೈಡರ್ ಗೆ ಡಿಕ್ಕಿಹೊಡೆದು ಕಾರು ಬಳಿಕ ಬಸ್ ಗೆ ಗುದ್ದಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಿದಾರೆ.

5) ತಂದೆ-ತಾಯಿ ಪ್ರೀತಿ ಸಿಗುತ್ತಿಲ್ಲ ಎಂದು ಬಾಲಕಿ ಆತ್ಮಹತ್ಯೆ
ಬೆಂಗಳೂರು: ಹೊಸ ವರ್ಷದ ಸಂದರ್ಭದಲ್ಲೇ ಬಾಲಕಿಯೊಬ್ಬಳು ದುಡುಕಿನ ನಿರ್ಧಾರ ಕೈಗೊಂಡಿದ್ದಾಳೆ. ತಂದೆ-ತಾಯಿ ಪ್ರೀತಿ ಸಿಗುತ್ತಿಲ್ಲ ಎಂದು ಮನನೊಂದು ಬಾಲಕಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಲೇಖನಾ (17) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕಿ. ಲೇಖನಾ ಹತ್ತನೆ ತರಗತಿ ಅನುತ್ತೀರ್ಣಳಾಗಿದ್ದಳು. ಮನೆಯಲ್ಲಿಯೇ ವಾಸವಾಗಿದ್ದಳು. ಕೌಟುಂಬಿಕ ಕಲಹದಿಂದಾಗಿ ತಂದೆ-ತಾಯಿ ದೂರಾಗಿದ್ದರು.

ತಂದೆ ಬೇರೆ ಕಡೆ ವಾಸವಾಗಿದ್ದರೆ, ಲೇಖನಾ ತಾಯಿ ಜೊತೆ ವಾಸವಾಗಿದ್ದಳು. ನನಗೆ ತಂದೆ-ತಾಯಿ ಪ್ರೀತಿ ಸಿಗುತ್ತಿಲ್ಲ. ಒಂಟಿ ಭಾವನೆ ಕಾಡುತ್ತಿದೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾಳೆ.ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

6) ಮನೆ ಮುಂದೆಯೇ ವ್ಯಕ್ತಿಯ ಬರ್ಬರ ಹತ್ಯೆ
ವ್ಯಕ್ತಿಯೋರ್ವನನ್ನು ಮನೆ ಮುಂದೆಯೇ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರೇಚಣ್ಣ ಕೊಲೆಯಾದ ಆಟೋ ಚಾಲಕ. ಕೊಳ್ಳೆಗಾಲ ಮೂಲದ ರೇಚಣ್ಣ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಾಸ್ ಆಗಿದ್ದರು. ತಡರಾತ್ರಿ ಬಾರ್ ಗೆ ಹೋಗಿ ಕುಡಿದು ಮನೆಗೆ ಬಂದಿದ್ದರು. ಮನೆಯಿಂದ ಹೊರ ಬರುತ್ತಿದ್ದಂತೆಯೇ ರೇಚಣ್ಣ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.ಹಿಂದಿನಿಂದ ಬೆನ್ನಿಗೆ ಚಾಕು ಇರಿದು ಪರಾರಿಯಾಗಿದ್ದಾರೆ. ಗಂಭೀರವಾಗಿ ಹಲ್ಲೆಗೊಳಗಾದ ರೇಚಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮನೆಯ ಮುಂದೆಯೇ ಈ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

7) ಮೆಸೇಜ್ ಮಾಡಿದ್ದಕ್ಕೆ ಯುವಕನ ಕೊಲೆ
ಚಿಕ್ಕಮಗಳೂರು : ನಿಶ್ಚಿತಾರ್ಥವಾದ ಯುವತಿಗೆ ಇನ್ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ಕಾಟ ಕೊಟ್ಟ ಯುವಕನನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಅತ್ತಿಗನಾಳು ಗ್ರಾಮದ ಬಳಿ ಈ ಘಟನೆ ನಡೆದಿದೆ.

ಕೊಲೆಯಾದ ಯುವಕನನ್ನು ಮಂಜುನಾಥ್ (21) ಎಂದು ಗುರುತಿಸಲಾಗಿದೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಮಂಜುನಾಥ್ ಗೆ ಯುವತಿಯೋರ್ವಳ ಪರಿಚಯವಾಗಿತ್ತು. ಆಕೆಗೆ ಬೇರೆ ಹುಡುಗ (ವೇಣು) ಜೊತೆ ಎಂಗೇಜ್ ಮೆಂಟ್ ಆಗಿದ್ದರೂ ಮಂಜುನಾಥ್ ಪದೇ ಪದೇ ಮೆಸೇಜ್ ಮಾಡುತ್ತಿದ್ದನು. ಮೆಸೇಜ್ ಮಾಡಬೇಡ ಎಂದು ಯುವತಿ ಮಂಜುನಾಥ್ ಗೆ ತಿಳಿಸಿದ್ದಳು.ಆದರೂ ಮಂಜುನಾಥ್ ತನ್ನ ಚಾಳಿ ಬಿಡಲಿಲ್ಲ.

ಈ ವಿಷಯವನ್ನ ಯುವತಿ ವೇಣುಗೆ ತಿಳಿಸಿದ್ದಾಳೆ. ಮಾತನಾಡಬೇಕು ಎಂದು ಮಂಜುನಾಥ್ ರನ್ನು ಕರೆಸಿಕೊಂಡ ವೇಣು ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಮಂಜುನಾಥ್ ಗೆ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಂಜುನಾಥ್ ನನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಯುವಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

8) ಬೈಕ್ ಅಪಘಾತದಲ್ಲಿ ಯುವಕ ಸಾವು
ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಮುಗಿಸಿ ಅತಿವೇಗದಲ್ಲಿ ಬೈಕ್ ಚಲಾಯಿಸಿಕೊಂಡು ತೆರಳುತ್ತಿದ್ದಾಗ ಭೀಕರ ಅಪಘಾತ ಸಂಭವಿಸಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ ನಡೆದಿದೆ.ವೇಗವಾಗಿ ಬಂದ ರಾಯಲ್ ಎನ್ ಫೀಲ್ಡ್ ಬೈಕ್ ದೇವಸ್ಥಾನದ ಗೋಡೆಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಂದು ನಸುಕಿನ ಜಾವ 2:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.ವೈಯ್ಯಾಲಿಕಾವಲ್ ನಿವಾಸಿ ಶರತ್ ಮೃತ ದುರ್ದೈವಿ. ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

9) ಕಲ್ಲು ಎತ್ತಿ ಹಾಕಿ ಯುವಕನ ಕೊಲೆ
ಹಾವೇರಿ: ತಂದೆಯ ಅಂತ್ಯಕ್ರಿಯೆ ಮುಗಿಸಿಕೊಂಡು ಬರುತ್ತಿದ್ದ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಸ್ನೇಹಿತನಿಂದಲೇ ವ್ಯಕ್ತಿಯ ಕೊಲೆ ನಡೆದಿದೆ.ಹಾವೇರಿ ತಾಲೂಕಿನ ಹೊಂಬರಡಿ ಗ್ರಾಮದಲ್ಲಿ ಘಟನೆ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಂಜುನಾಥ್ ಮುದ್ದಿನವರ(40) ಕೊಲೆ ಮಾಡಲಾಗಿದೆ.

ಎಣ್ಣೆ ನಶೆಯಲ್ಲಿ ಸ್ನೇಹಿತನನ್ನೇ ಶಿವಕುಮಾರ್ ಶಿವಪುರ ಕೊಲೆ ಮಾಡಿದ್ದಾನೆ. ಡಿಸೆಂಬರ್ 30ರಂದು ಹೃದಯಾಘಾತದಿಂದ ಮಂಜುನಾಥ ತಂದೆ ರಾಜೇಂದ್ರ ನಿಧನರಾಗಿದ್ದು, ತಂದೆ ಅಂತ್ಯಕ್ರಿಯೆ ಮುಗಿಸಿಸಿಕೊಂಡು ಬರುತ್ತಿದ್ದ ಮಂಜುನಾಥ್ ಸ್ನೇಹಿತ ಶಿವಕುಮಾರನೊಂದಿಗೆ ಮದ್ಯ ಸೇವನೆ ಮಾಡಿದ್ದಾನೆ. ಮದ್ಯದ ನಶೆಯಲ್ಲಿ ಇಬ್ಬರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮಂಜುನಾಥನನ್ನು ಶಿವಕುಮಾರ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಹಾವೇರಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

10) ನಿಟ್ಟೆ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಎನ್ ವಿನಯ್ ಹೆಗ್ಡೆ ನಿಧನ
ಮಂಗಳೂರು : ನಿಟ್ಟೆ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಎನ್ ವಿನಯ್ ಹೆಗ್ಡೆ (86) (N. Vinay Hegde) ಇಂದು ಬೆಳಗಿನ ಜಾವ ನಿಧನರಾದರು. ಮಂಗಳೂರಿನ ಕದ್ರಿಯ ಶಿವಭಾಗ್ ನಿವಾಸದಲ್ಲಿ ಅವರು ನಿಧನರಾಗಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಮೂಲದ ವಿನಯ್ ಹೆಗ್ಡೆ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು.ವಿನಯ್ ಹೆಗ್ಡೆ ಅವರು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯೂರ್ತಿ ಕೆಎಸ್ ಹೆಗ್ಡೆ ಅವರ ದ್ವಿತೀಯ ಪುತ್ರರಾಗಿದ್ದಾರೆ. ಹಾಗೂ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಸೋದರರಾಗಿದ್ದಾರೆ. ಎನ್ ವಿನಯ್ ಹೆಗ್ಡೆ ನಿಧನಕ್ಕೆ ಸ್ಪೀಕರ್ ಯು.ಟಿ ಖಾದರ್ ಸಂತಾಪ ಸೂಚಿಸಿದ್ದಾರೆ.

ವಿನಯ್ ಹೆಗ್ಡೆ ಅವರು ಮಂಗಳೂರಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. ಲೆಮಿನಾ ಸಸ್ಪೆನ್ಷನ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಲೆಮಿನಾ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾಗಿದ್ದಾರೆ ಶಿಕ್ಷಣ ಮತ್ತು ಸಮಾಜ ಸೇವೆಗಾಗಿ ಅವರಿಗೆ ಕರ್ನಾಟಕ ಸರ್ಕಾರದಿಂದ ‘ರಾಜ್ಯೋತ್ಸವ ಪ್ರಶಸ್ತಿ’ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಲಭಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular