2026ರ ಹೊಸ ವರ್ಷದ ಸ್ವಾಗತಕ್ಕೆ ದೇಶಾದ್ಯಂತ ಸಿದ್ಧತೆಗಳು ನಡೆಯುತ್ತಿವೆ. ಈ ಪಾರ್ಟಿ ಮೂಡ್ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ಗಂಡಂದಿರ ನಿದ್ದೆಗೆಡಿಸುವ ಸುದ್ದಿಯೊಂದು ವೇಗವಾಗಿ ಹರಡುತ್ತಿದೆ. “ಪತ್ನಿಯ ಒಪ್ಪಿಗೆಯಿಲ್ಲದೆ ಮದ್ಯಪಾನ ಮಾಡಿದರೆ ಪತಿಗೆ ಮೂರು ವರ್ಷ ಜೈಲು ಶಿಕ್ಷೆಯಾಗಬಹುದು” ಎಂಬ ವರದಿಗಳು ಗಲಿಬಿಲಿ ಸೃಷ್ಟಿಸಿವೆ. ಆದರೆ, ಈ ಕಾನೂನು ಕೇವಲ ಕುಡಿಯುವುದಕ್ಕೆ ಮಾತ್ರ ಸಂಬಂಧಿಸಿದ್ದೇ ಅಥವಾ ಇದರ ಹಿಂದೆ ಬೇರೆ ಅರ್ಥವಿದೆಯೇ? ಇಲ್ಲಿದೆ ಪೂರ್ಣ ಮಾಹಿತಿ.
ಏನಿದು ಹೊಸ ಕಾನೂನು? ಕಳೆದ ಜುಲೈ 1, 2024 ರಿಂದ ಜಾರಿಗೆ ಬಂದಿರುವ ‘ಭಾರತೀಯ ನ್ಯಾಯ ಸಂಹಿತೆ’ (BNS 2023) ಅಡಿಯಲ್ಲಿ ಈ ನಿಯಮದ ಬಗ್ಗೆ ಚರ್ಚೆ ನಡೆಯುತ್ತಿದೆ. ಹಳೆಯ ಐಪಿಸಿ ಸೆಕ್ಷನ್ 498A (ಮಹಿಳೆಯರ ಮೇಲಿನ ದೌರ್ಜನ್ಯ) ಈಗ ಬಿಎನ್ ಎಸ್ ನ ಸೆಕ್ಷನ್ 85 ರ ಅಡಿಯಲ್ಲಿ ಅಪ್‌ಗ್ರೇಡ್ ಆಗಿದೆ. ಇದರ ಪ್ರಕಾರ, ಒಬ್ಬ ಪತಿ ಮದ್ಯಪಾನ ಅಥವಾ ಯಾವುದೇ ಮಾದಕ ದ್ರವ್ಯ ಸೇವಿಸಿ ತನ್ನ ಪತ್ನಿಗೆ ದೈಹಿಕ ಅಥವಾ ಮಾನಸಿಕ ಕಿರುಕುಳ ನೀಡಿದರೆ ಆತನಿಗೆ ಕಠಿಣ ಶಿಕ್ಷೆಯಾಗುವ ಅವಕಾಶವಿದೆ.
ಕೇವಲ ಕುಡಿದರೆ ಜೈಲಾಗುತ್ತದೆಯೇ? ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವಂತೆ “ಕುಡಿಯಲು ಹೆಂಡತಿಯ ಅನುಮತಿ ಬೇಕು” ಎಂಬುದು ಕೇವಲ ಸರಳೀಕೃತ ಮಾತು. ಕಾನೂನಿನ ಅಸಲಿ ಉದ್ದೇಶವೇನೆಂದರೆ, ಮದ್ಯ ಸೇವಿಸಿದ ನಂತರ ಪತಿ ಮನೆಯಲ್ಲಿ ಗಲಾಟೆ ಮಾಡುವುದು, ಪತ್ನಿಯ ಸುರಕ್ಷತೆ, ಮಾನಸಿಕ ನೆಮ್ಮದಿ ಅಥವಾ ಘನತೆಗೆ ಧಕ್ಕೆ ತರುವಂತೆ ವರ್ತಿಸಿದರೆ ಮಾತ್ರ ಈ ಕಾಯ್ದೆ ಅನ್ವಯವಾಗುತ್ತದೆ. ಪತ್ನಿ ಮದ್ಯಪಾನ ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಿದ್ದರೂ, ಪತಿ ಕುಡಿದು ಬಂದು ಮನೆಯಲ್ಲಿ ದೌರ್ಜನ್ಯ ಎಸಗಿದರೆ ಅದನ್ನು ‘ಕ್ರೌರ್ಯ’ ಎಂದು ಪರಿಗಣಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಪತ್ನಿ ಎಫ್‌ಐಆರ್ ದಾಖಲಿಸಿದರೆ ಗಂಡನಿಗೆ 3 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.
ಮನೆಗಳಲ್ಲಿ ಶಾಂತಿ ಕಾಪಾಡುವ ಉದ್ದೇಶ ದೇಶದಲ್ಲಿ ನಡೆಯುವ ಶೇಕಡಾ 40ಕ್ಕೂ ಹೆಚ್ಚು ಕೌಟುಂಬಿಕ ಹಿಂಸಾಚಾರ ಪ್ರಕರಣಗಳಲ್ಲಿ ಮದ್ಯಪಾನವೇ ಪ್ರಮುಖ ಕಾರಣವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ರಕ್ಷಣೆ ನೀಡಲು ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ. ಆದರೆ, ಪತಿ ಮದ್ಯಪಾನ ಮಾಡಿ ಯಾವುದೇ ಹಿಂಸೆ ನೀಡದೆ ಶಾಂತಿಯುತವಾಗಿದ್ದರೆ ಈ ಕಾನೂನು ಅನ್ವಯಿಸುವುದಿಲ್ಲ ಎಂದು ಕಾನೂನು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಹೊಸ ವರ್ಷದ ಪಾರ್ಟಿ ನೆಪದಲ್ಲಿ ಅತಿಯಾಗಿ ಕುಡಿದು ಮನೆಯಲ್ಲಿ ಗಲಾಟೆ ಮಾಡುವವರಿಗೆ ಈ ಕಾನೂನು ಎಚ್ಚರಿಕೆಯ ಗಂಟೆಯಾಗಿದೆ. ಕೇವಲ ಮದ್ಯಪಾನ ಮಾಡುವುದು ಅಪರಾಧವಲ್ಲದಿದ್ದರೂ, ಅದರ ಪ್ರಭಾವದಿಂದ ಪತ್ನಿಗೆ ಕಿರುಕುಳ ನೀಡುವುದು ಖಂಡಿತಾ ಜೈಲು ಪಾಲಾಗುವಂತೆ ಮಾಡಬಹುದು.

