ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಈವರೆಗೆ ಕಾಣದಂತಹ ವಿಭಿನ್ನ ಶೈಲಿಯ ದರೋಡೆ ನಡೆದಿದೆ. ವಕೀಲರೊಬ್ಬರ ಮನೆಯಲ್ಲಿದ್ದ ಖತರ್ನಾಕ್ ಡೋಬರ್‌ಮನ್ ತಳಿಯ ನಾಯಿಗಳಿಗೆ ಮಾಂಸದ ಚೂರುಗಳನ್ನು ಹಾಕಿ ಸದ್ದಿಲ್ಲದಂತೆ ಮಾಡಿದ ಎಂಟು ಮಂದಿ ಮುಸುಕುಧಾರಿ ದರೋಡೆಕೋರರು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ 18 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ.
ಶ್ವಾನಗಳನ್ನು ಮೌನಗೊಳಿಸಲು ಮಾಂಸದ ತಂತ್ರ ಸೂರಜ್ ನಗರದ ಏರ್‌ಪೋರ್ಟ್ ರಸ್ತೆಯಲ್ಲಿರುವ ವಕೀಲ ಅಖಿಲೇಶ್ ಶ್ರೀವಾಸ್ತವ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಅಖಿಲೇಶ್ ಅವರು ಚಿಕಿತ್ಸೆಗಾಗಿ ಇಂದೋರ್‌ಗೆ ತೆರಳಿದ್ದ ಸಮಯ ನೋಡಿ ದರೋಡೆಕೋರರು ಸಂಚು ರೂಪಿಸಿದ್ದರು. ಮನೆಯಲ್ಲಿ ಎರಡು ಡೋಬರ್‌ಮನ್ ನಾಯಿಗಳಿದ್ದುದನ್ನು ಮೊದಲೇ ಅರಿತಿದ್ದ ತಂಡ, ಹೊರಗಿನಿಂದ ಮಾಂಸದ ತುಂಡುಗಳನ್ನು ಎಸೆದಿದೆ. ಈ ಮಾಂಸದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿರುವ ಶಂಕೆ ಇದ್ದು, ಅದನ್ನು ತಿಂದ ನಂತರ ನಾಯಿಗಳು ಬೊಗಳುವುದನ್ನು ನಿಲ್ಲಿಸಿವೆ.
ವ್ಯವಸ್ಥಿತವಾಗಿ ನಡೆದ ಕಾರ್ಯಾಚರಣೆ ಡಿಸೆಂಬರ್ 25 ಮತ್ತು 26ರ ಮಧ್ಯರಾತ್ರಿ 1:15 ರಿಂದ 3:45ರ ನಡುವೆ ಈ ದರೋಡೆ ನಡೆದಿದೆ. ನಾಯಿಗಳು ಶಾಂತವಾಗುತ್ತಿದ್ದಂತೆಯೇ ಎಂಟು ಮಂದಿ ಮುಸುಕುಧಾರಿಗಳು ಕಂಪೌಂಡ್ ಹಾರಿ ಒಳಗೆ ನುಗ್ಗಿದ್ದಾರೆ. ಮನೆಯ ಬೀಗ ಮುರಿದು ಒಳಗಿದ್ದ ಚಿನ್ನಾಭರಣ ಹಾಗೂ 18 ಲಕ್ಷ ರೂಪಾಯಿ ನಗದು ಲೂಟಿ ಮಾಡಿದ್ದಾರೆ. ಮೋಜಿನ ಸಂಗತಿಯೆಂದರೆ, ದೋಚಿದ ಮಾಲನ್ನು ಸಾಗಿಸಲು ಅವರು ಲೋಡಿಂಗ್ ವಾಹನವನ್ನೇ ತಂದಿದ್ದರು.
ಸಿಸಿಟಿವಿಯಲ್ಲಿ ಸೆರೆಯಾಯ್ತು ಅಟ್ಟಹಾಸ ವಕೀಲರ ಮನೆಯಲ್ಲಿ ಅಳವಡಿಸಲಾಗಿದ್ದ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾಗಳಲ್ಲಿ ದರೋಡೆಕೋರರ ಅಟ್ಟಹಾಸ ಸೆರೆಯಾಗಿದೆ. ಈ ಕ್ಯಾಮೆರಾಗಳಲ್ಲಿ ದೃಶ್ಯದ ಜೊತೆಗೆ ಧ್ವನಿಯೂ ರೆಕಾರ್ಡ್ ಆಗುವ ಸೌಲಭ್ಯವಿದ್ದು, ಕಳ್ಳರು ಮಾತನಾಡಿಕೊಂಡಿರುವುದು ಪೊಲೀಸರಿಗೆ ಮಹತ್ವದ ಸುಳಿವು ನೀಡಿದೆ. ಮರುದಿನ ಬೆಳಿಗ್ಗೆ ಕೆಲಸದವಳು ಬಂದಾಗ ಮನೆಯ ಸ್ಥಿತಿಯನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರ ತನಿಖೆ ಭೋಪಾಲ್‌ನಲ್ಲಿ ಶ್ವಾನಗಳಿಗೆ ಆಹಾರ ನೀಡಿ ದರೋಡೆ ಮಾಡಿದ ಇಂತಹ ಮೊದಲ ಪ್ರಕರಣ ಇದಾಗಿದೆ. ಕೋಹೆಫಿಜಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ದರೋಡೆಕೋರರಿಗೆ ಮನೆಯ ಸಂಪೂರ್ಣ ಮಾಹಿತಿ ಮೊದಲೇ ಇತ್ತು ಎಂಬುದು ಪೊಲೀಸರ ಶಂಕೆ.

