ಕೇಂದ್ರದಿಂದ ಹೆಸರು ಕಾಳು ಖರೀದಿಸುವ ಸಮಯದ ಅವಧಿ ವಿಸ್ತರಿಸಲಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಖರೀದಿ ಸಮಯವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ.
ಕರ್ನಾಟಕದ ಮುಂಗಾರು ಹಂಗಾಮಿನ ಬೆಳೆಯಾಗಿರುವ ಹೆಸರು ಕಾಳು ಖರೀದಿಗೆ ರೈತರಿಗೆ ಅನುಕೂಲವಾಗುವಂತೆ ಖರೀದಿ ಸಮಯ ವಿಸ್ತರಿಸಲು ಕೋರಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸಮಯ ವಿಸ್ತರಿಸಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಕರ್ನಾಟಕದಲ್ಲಿ 2025-26 ರ ಮುಂಗಾರು ಹಂಗಾಮಿನಲ್ಲಿ ಬೆಳೆದ ಹೆಸರುಕಾಳು(ಮೂಂಗ್) ಖರೀದಿಯನ್ನು ಬೆಂಬಲ ಬೆಲೆ ಯೋಜನೆ(PSS) ಅಡಿಯಲ್ಲಿ ಖರೀದಿಸುವ ಸಮಯ ವಿಸ್ತರಿಸುವಂತೆ ನಾನು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಣ್ ಅವರಿಗೆ ವಿನಂತಿಸಿದ್ದೆ. ಅದರಂತೆ ಅವರು ಹೆಸರುಕಾಳು(ಮೂಂಗ್) ಖರೀದಿಯನ್ನು ಬೆಂಬಲ ಬೆಲೆ ಯೋಜನೆ(PSS) ಅಡಿಯಲ್ಲಿ ಖರೀದಿಸುವ ಸಮಯ ವಿಸ್ತರಿಸಿದ್ದಕ್ಕಾಗಿ ಅವರಿಗೆ ನನ್ನ ಕೃತಜ್ಞತೆಗಳು. ಈ ನಿರ್ಧಾರದಿಂದ ಕೃಷಿಕರ ಉತ್ಪನ್ನಗಳಿಗೆ ನ್ಯಾಯಯುತ ಬೆಂಬಲ ಬೆಲೆಯನ್ನು ಖಚಿತಪಡಿಸುತ್ತದೆ.
ಖರೀದಿ ಸಮಯವನ್ನು ಕೇಂದ್ರ ಸರ್ಕಾರ ವಿಸ್ತರಿಸಿರುವದರಿಂದ ರಾಜ್ಯ ಸರ್ಕಾರ ಖರೀದಿ ಪ್ರಕ್ರಿಯೆಯನ್ನು ಮುಂದುವರಿಸುವಂತೆ ವಿನಂತಿಸುತ್ತೇನೆ. ರಾಜ್ಯದ ರೈತರ ಹಿತಕಾಪಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ರೈತಪರ ನಿರ್ಣಯ, ರಾಜ್ಯದ ರೈತರ ಸಮಸ್ಯೆಗೆ ಸತತವಾಗಿ ಸ್ಪಂದಿಸಿ ಬೆಳೆಗಳ ಖರೀದಿಗೆ ಅನುಮೋದನೆ ನೀಡಿದ ಪ್ರಧಾನಿ ಮೋದಿ, ಕೃಷಿ ಸಚಿವ ಶಿವರಾಜಸಿಂಗ್ ಚೌಹಾಣ್ ಅವರಿಗೆ ಧನ್ಯವಾದಗಳು ಎಂದು ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.

