ಬೆಂಗಳೂರು: ಪ್ರೀತಿಯ ಹೆಸರಲ್ಲಿ ಯುವತಿಗೆ ಲವ್, ಸೆಕ್ಸ್, ದೋಖಾ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆರೋಪಿ ಶುಭಾಂಶು ಶುಕ್ಲ(27)ನನ್ನು ಪೊಲೀಸರು ಬಂಧಿಸಿದ್ದಾರೆ. ಶುಭಾಂಶು ಶುಕ್ಲ ಮೊದಲು ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡಿದ್ದ. ಈ ವೇಳೆ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಬಾಲಕಿಯ ಮೂಲಕ ಮನೆಯವರ ಪರಿಚಯ ಮಾಡಿಕೊಂಡಿದ್ದ ಶುಭಾಂಶು ಶುಕ್ಲ ನಂತರ ಬಾಲಕಿಯ ಸಹೋದರಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿದ್ದಾನೆ.
ಕೆಲಸದ ನಿಮಿತ್ತ ಮುಂಬೈಗೆ ತೆರಳುವುದಾಗಿ ಪೋಷಕರಿಗೆ ಹೇಳಿಸಿದ್ದ ಆರೋಪಿ, ನಂತರ ಯುವತಿಯ ಜೊತೆಗೆ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದ. ಫ್ಲ್ಯಾಟ್ ನಲ್ಲಿ ಯುವತಿ ಜೊತೆಗೆ ಇದ್ದ ಶುಭಾಂಶು ಶುಕ್ಲ ಸಂತ್ರಸ್ತ ಯುವತಿಯ ಬಳಿ 37 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾನೆ. ಇದೇ ಸಂದರ್ಭದಲ್ಲಿ ಶುಭಾಂಶು ಶುಕ್ಲ ಮದುವೆಯಾಗಿರುವ ವಿಚಾರ ಯುವತಿಗೆ ಗೊತ್ತಾಗಿ ಪ್ರಶ್ನಿಸಿದ್ದಾಳೆ. ಪತ್ನಿಗೆ ವಿಚ್ಛೇದನ ನೀಡುವುದಾಗಿ ಆರೋಪಿ ಹೇಳುತ್ತಿದ್ದ.
ನಂತರ ಯುವತಿಯ ಬಳಿ ಹಣ ಪಡೆದು ಚಿತ್ರ ಹಿಂಸೆ ನೀಡುತ್ತಿದ್ದ. ಚಿತ್ರ ಹಿಂಸೆ ತಾಳಲಾರದೆ ಯುವತಿ ಆತನನ್ನು ಬಿಟ್ಟು ಬಂದಿದ್ದಾಳೆ. ಯುವತಿಯ ಮನೆಯಲ್ಲಿ ಶುಭಾಂಶು ಶುಕ್ಲ 550 ಗ್ರಾಂ ಚಿನ್ನಾಭರ ಕಳವು ಮಾಡಿದ್ದಾನೆ ಎನ್ನಲಾಗಿದೆ. ನೊಂದ ಯುವತಿ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

