ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ತನ್ನ ಗ್ರಾಹಕರಿಗೆ ಹೊಸ ವರ್ಷಕ್ಕೆ ಭರ್ಜರಿ ಉಡುಗೊರೆ ನೀಡಿದೆ. ಬಾಕಿ ಇರುವ ನೀರಿನ ಅಸಲು ಮೊತ್ತ ಏಕಕಾಲದಲ್ಲಿ ಪಾವತಿಸಿದಲ್ಲಿ ಬಡ್ಡಿ, ದಂಡ ಮತ್ತು ಇತರೆ ಶುಲ್ಕಗಳನ್ನು ಶೇ. 100ರಷ್ಟು ಮನ್ನಾ ಮಾಡುವುದಾಗಿ ಘೋಷಿಸಿದೆ.
ಜಲ ಮಂಡಳಿಯ ಒನ್ ಟೈಮ್ ಸೆಟ್ಲ್ ಮೆಂಟ್ ಯೋಜನೆಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಯೋಜನೆ ಅನುಷ್ಠಾನಕ್ಕೆ ಆದೇಶ ಹೊರಡಿಸಿದೆ. ಜನವರಿ 1ರಿಂದ ಮಾರ್ಚ್ 31ರವರೆಗೆ ರಿಯಾಯಿತಿಯಲ್ಲಿ ನೀರಿನ ಶುಲ್ಕ ಪಾವತಿಗೆ ಅವಕಾಶ ಕಲ್ಪಿಸಲು ಜಲಮಂಡಳಿ ತೀರ್ಮಾನಿಸಿದೆ.
ಇದರಿಂದ ಗೃಹ ಮತ್ತು ವಾಣಿಜ್ಯ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ನೀರಿನ ಬಿಲ್ ಶುಲ್ಕವನ್ನು ಸುಲಭವಾಗಿ ಪಾವತಿಸಿಕೊಳ್ಳಬಹುದು. ಬಡ್ಡಿ, ದಂಡ ಮತ್ತು ದಂಡದ ಶುಲ್ಕಗಳನ್ನು ಸಂಪೂರ್ಣವಾಗಿ ಮನ್ನಾ ಮಾಡುವುದರಿಂದ ಗ್ರಾಹಕರ ಹೊರೆ ಕಡಿಮೆಯಾಗಲಿದೆ.

