HomeKarnatakaರಹಸ್ಯ ವರದಿ ನೋಡಿ ನಾಯಕತ್ವ ಬದಲಾವಣೆ ಚರ್ಚೆಗೆ ರಾಹುಲ್ ಗಾಂಧಿ ಅಲ್ಪ ವಿರಾಮ!

ರಹಸ್ಯ ವರದಿ ನೋಡಿ ನಾಯಕತ್ವ ಬದಲಾವಣೆ ಚರ್ಚೆಗೆ ರಾಹುಲ್ ಗಾಂಧಿ ಅಲ್ಪ ವಿರಾಮ!

“ನಾಯಕತ್ವ ಬದಲಾವಣೆ ವಿಚಾರವನ್ನು ರಾಹುಲ್ ಗಾಂಧಿಯವರು ತೀರ್ಮಾನಿಸಬೇಕು. ಅವರು ಏನು ತೀರ್ಮಾನಿಸುತ್ತಾರೋ ಅದಕ್ಕೆ ನಾವು ಬದ್ಧ. ನಾನು ಈ ಬಗ್ಗೆ ಪಕ್ಷದ ವರಿಷ್ಠರ ಬಳಿ ಮಾತನಾಡಿದ್ದು, ನಾವು ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ. ಅವರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿದ್ದೇವೆ” ಸೋಮವಾರ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆ ಇದು.

ಹೌದು ನವೆಂಬರ್  20ರಂದು ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸಿದ ಬಳಿಕ ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ಆರಂಭವಾಗಿತ್ತು. ಆದರೆ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿಸಿ ಈ ಚರ್ಚೆಗೆ ಹೈಕಮಾಂಡ್ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದೆ.

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಪ್ರಕಾರ, ಮಾಧ್ಯಮದವರೇ ನಾಯಕತ್ವ ಬದಲಾವಣೆಯ ಬಗ್ಗೆ ಹೆಚ್ಚಾಗಿ ಚರ್ಚಿಸುತ್ತಿದ್ದಾರೆ. ಆದರೆ ಪಕ್ಷದೊಳಗೆ ಈ ಕುರಿತು ಚರ್ಚೆಗಳು, ಪ್ರಸ್ತಾಪಗಳು ಇಲ್ಲ. ಏನೇ ಇದ್ದರೂ ಅದು ಹೈಕಮಾಂಡ್ ನೋಡಿಕೊಳ್ಳುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಹಸ್ಯ ವರದಿ ಪಡೆದ ರಾಹುಲ್ ಗಾಂಧಿ: ಕರ್ನಾಟಕ ಕಾಂಗ್ರೆಸ್ ನಾಯಕತ್ವ ಬದಲಾವಣೆ ವಿಚಾರ ಭಾರೀ ಚರ್ಚೆಗೆ ಬಂದ ಕಾರಣ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ರಹಸ್ಯ ವರದಿಯನ್ನು ಪಡೆದಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಹಿರಿಯ ನಾಯಕ ಪಿ.ಚಿದರಂಬರಂ, ಚುನಾವಣಾ ತಂತ್ರಗಾರ ಸುನೀಲ್‌ ಕುನಗೋಳು ಸೇರಿದಂತೆ ವಿವಿಧ ಕಡೆಯಿಂದ ರಾಹುಲ್ ಗಾಂಧಿ ವರದಿಯನ್ನು ತರಿಸಿಕೊಂಡಿದ್ದಾರೆ.

ಎಲ್ಲಾ ವರದಿಗಳು ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಮಾಡಲು ಇದು ಸಕಾಲವಲ್ಲ ಎಂಬ ಅಂಶವನ್ನೇ ಶಿಫಾರಸು ಮಾಡಿವೆ. ಆದ್ದರಿಂದಲೇ ಡಿ.ಕೆ.ಶಿವಕುಮಾರ್ ಕಡೆಯಿಂದ ಎಷ್ಟು ಒತ್ತಡಗಳು ಬಂದರೂ ಸಹ ರಾಹುಲ್ ಗಾಂಧಿ ನಾಯಕತ್ವ ಬದಲಾವಣೆ ಚರ್ಚೆಗೆ ಅಲ್ಪ ವಿರಾಮವನ್ನು ಕೊಟ್ಟಿದ್ದಾರೆ.

ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್, ಸಚಿವ ಪ್ರಿಯಾಂಕ್ ಖರ್ಗೆ, ಕೆ.ಜೆ.ಜಾರ್ಜ್ ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿ ಭೇಟಿಯಾಗಿದ್ದರು. ಆಗ ಸಹ ನಾಯಕತ್ವ ಬದಲಾವಣೆ ಕುರಿತು ರಾಹುಲ್ ಗಾಂಧಿ ಹಿರಿಯ ನಾಯಕರ ಅಭಿಪ್ರಾಯ ಸಂಗ್ರಹಣೆ ಮಾಡಿದ್ದಾರೆ. ಬಳಿಕ ಯಥಾಸ್ಥಿತಿ ಮುಂದುವರೆಸುವ ಕುರಿತು ತೀರ್ಮಾನಕ್ಕೆ ಬಂದಿದ್ದಾರೆ.

ರಾಹುಲ್ ಗಾಂಧಿ ತಮ್ಮ ತೀರ್ಮಾನದ ಕುರಿತು ಮಲ್ಲಿಕಾರ್ಜುನ ಖರ್ಗೆ ಅವರ ಬಳಿಯೂ ಚರ್ಚಿಸಿದ್ದರು. ಆದ್ದರಿಂದಲೇ ಕಳೆದ ವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿ, ನಾಯಕತ್ವ ಬದಲಾವಣೆ ಕುರಿತ ಚರ್ಚೆ ಸ್ಥಳೀಯವಾಗಿ ಇದೆ. ಅದನ್ನು ಸ್ಥಳೀಯ ನಾಯಕರು ಬಗೆಹರಿಸಿಕೊಳ್ಳಬೇಕು. ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ್ದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ 2026ರ ಕೇರಳ ವಿಧಾನಸಭೆ ಚುನಾವಣೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಮೂಲಗಳ ಪ್ರಕಾರ ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸೀಟು ಪಡೆದರೆ ಅವರು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ.

ಇನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹರ್ಯಾಣ ರಾಜ್ಯದ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಹೈಕಮಾಂಡ್ ನಾಯಕರು ಅವರನ್ನು ಹರ್ಯಾಣ ಕಾಂಗ್ರೆಸ್ ಘಟಕದ ಅಧ್ಯಕ್ಷರನ್ನಾಗಿ ಮಾಡಲು ಚಿಂತನೆ ನಡೆಸಿದೆ.

ಎಐಸಿಸಿಗೆ ಕರ್ನಾಟಕ ಮೂಲದ ಮಲ್ಲಿಕಾರ್ಜುನ ಖರ್ಗೆ ಅವರೇ ಅಧ್ಯಕ್ಷರಾದ ಕಾರಣ ಹೈಕಮಾಂಡ್‌ನ ಯಾವ ನಾಯಕರು ಕರ್ನಾಟಕದ ಬಗ್ಗೆ ಅಷ್ಟು ತಲೆಕೆಡಿಸಿಕೊಂಡಿಲ್ಲ. ತಮ್ಮ ತಮ್ಮ ರಾಜ್ಯದ ರಾಜಕೀಯದಲ್ಲಿ ಅವರು ಬ್ಯುಸಿಯಾಗಿದ್ದಾರೆ.

ಇಂದು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಈ ಸಭೆ ಬಳಿಕ ರಾಹುಲ್ ಗಾಂಧಿ ಯುರೋಪ್ ಪ್ರವಾಸ ಕೈಗೊಳ್ಳಲಿದ್ದಾರೆ. ಜನವರಿ 10ರ ಬಳಿಕ ಅವರು ವಾಪಸ್ ಆಗಲಿದ್ದು, ಬಳಿಕ ಕರ್ನಾಟಕದ ನಾಯಕತ್ವ ಬದಲಾವಣೆ ವಿಚಾರದ ಕುರಿತು ಗಮನ ಹರಿಸಲಿದ್ದಾರೆ.

ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಚರ್ಚೆಗೆ ಸದ್ಯಕ್ಕೆ ಅಲ್ಪ ವಿರಾಮ ಬಿದ್ದಿದೆ. ಆದ್ದರಿಂದ ರಾಹುಲ್ ಗಾಂಧಿ ರಾಜ್ಯದ ಯಾವ ಕಾಂಗ್ರೆಸ್ ನಾಯಕರ ಭೇಟಿಗೂ ಸಹ ಸಮಯವನ್ನು ನೀಡುತ್ತಿಲ್ಲ. ರಾಜ್ಯದ ವಿಚಾರದಲ್ಲಿ ಅವರು ಮೌನಕ್ಕೆ ಶರಣಾಗಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular