ಹಾವೇರಿಯ ಜಿಲ್ಲಾಸ್ಪತ್ರೆ ಆವರಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆ ಮಾಡುವಾಗ ಶಿಶುವಿನ ತಲೆಗೆ ಕತ್ತರಿ ತಗುಲಿ ಗಾಯವಾಗಿದೆ. ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಪೋಷಕರು ಆರೋಪಿಸಿದ್ದಾರೆ.
ಹಾವೇರಿಯ ಮೊಹಮ್ಮದ್ ಮುಜಾಹಿದ್ ಅವರ ಪತ್ನಿ ಬೇಬಿ ಅಸ್ಮಾ ಗರ್ಭಿಣಿಯಾಗಿದ್ದು, ಹೆರಿಗೆ ನೋವು ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ಬಂದಿದ್ದಾರೆ. ಹೆರಿಗೆ ಮಾಡುವುದಾಗಿ ಡಾ. ಸ್ವಾತಿ ಮತ್ತು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದು, ಶಸ್ತ್ರಚಿಕಿತ್ಸೆ ಕೊಠಡಿಗೆ ಕರೆದುಕೊಂಡು ಹೋಗಿದ್ದಾರೆ.
ಹೆರಿಗೆ ಮುಗಿದ ನಂತರ ಶಿಶುವಿನ ಬಗ್ಗೆ ಪೋಷಕರಿಗೆ ಮಾಹಿತಿ ತಿಳಿಸಿದ ವೈದ್ಯರು, ಹೆರಿಗೆ ವೇಳೆ ಹೊಟ್ಟೆಯಿಂದ ಮಗುವನ್ನು ಹೊರಗೆ ತೆಗೆಯಲು ಸಾಕಷ್ಟು ಕಷ್ಟವಾಗಿದೆ. ಈ ವೇಳೆ ಮಗುವಿನ ತಲೆಗೆ ಕತ್ತರಿ ತಾಗಿದ್ದು ಎರಡು ಹೊಲಿಗೆ ಹಾಕಿದ್ದೇವೆ ಎಂದು ತಿಳಿಸಿದ್ದಾರೆ. ತಲೆಗೆ ಹೊಲಿಗೆ ಹಾಕಿದ ಸ್ಥಿತಿಯಲ್ಲೇ ನವಜಾತ ಶಿಶುವನ್ನು ಶಸ್ತ್ರಚಿಕಿತ್ಸೆ ಕೊಠಡಿಯಿಂದ ಹೊರಗೆ ತಂದ ವೈದ್ಯರು ಪೋಷಕರಿಗೆ ನೀಡಿದ್ದು, ಪೋಷಕರು ಆಕ್ರೋಶಗೊಂಡಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಮಗುವಿನ ತಲೆಗೆ ಗಾಯವಾಗಿದೆ. ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

