ಪಂಜಾಬ್ನ ಲೂಧಿಯಾನದಲ್ಲಿ ಯುವತಿಯೊಬ್ಬಳು ತನ್ನ ಪ್ರಾಣದ ಹಂಗು ತೊರೆದು ಸಶಸ್ತ್ರ ದರೋಡೆಕೋರನೊಬ್ಬನನ್ನು ಹಿಮ್ಮೆಟ್ಟಿಸಿದ ರೋಚಕ ಘಟನೆ ನಡೆದಿದೆ. ಹಣ ವರ್ಗಾವಣೆ ಮಾಡುವ ಅಂಗಡಿಯೊಂದಕ್ಕೆ ನುಗ್ಗಿ ದರೋಡೆಗೆ ಯತ್ನಿಸಿದ ಕಳ್ಳನಿಗೆ, ಅಲ್ಲಿ ಕೆಲಸಕ್ಕಿದ್ದ ಯುವತಿ ತಕ್ಕ ಪಾಠ ಕಲಿಸಿದ್ದಾಳೆ. ಈ ಎದೆನಡುಗಿಸುವ ಸಾಹಸದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.
ನಡೆದಿದ್ದೇನು?
ಲೂಧಿಯಾನದ ಹಂಬ್ರಾ ಪೊಲೀಸ್ ಚೌಕಿ ವ್ಯಾಪ್ತಿಯ ಮುಖ್ಯ ಮಾರುಕಟ್ಟೆಯಲ್ಲಿರುವ ಮನಿ ಟ್ರಾನ್ಸ್ಫರ್ ಅಂಗಡಿಯಲ್ಲಿ ಸೋನಿ ವರ್ಮಾ ಎಂಬ ಯುವತಿ ಕೆಲಸ ಮಾಡುತ್ತಿದ್ದರು. ಘಟನೆಯ ದಿನ ಸೋನಿ ಅವರು ಫೋನ್ನಲ್ಲಿ ಮಗ್ನರಾಗಿದ್ದಾಗ, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ವ್ಯಕ್ತಿಯೊಬ್ಬ ಅಂಗಡಿಯೊಳಗೆ ನುಗ್ಗಿದ್ದಾನೆ. ಕೂಡಲೇ ತನ್ನ ಬಳಿ ಇದ್ದ ಚೂಪಾದ ಮಚ್ಚನ್ನು ತೋರಿಸಿ ಬೆದರಿಸಿದ ದರೋಡೆಕೋರ, ಹಣವನ್ನೆಲ್ಲಾ ತಾನು ತಂದಿದ್ದ ಕಪ್ಪು ಬ್ಯಾಗ್ಗೆ ತುಂಬುವಂತೆ ಆದೇಶಿಸಿದ್ದಾನೆ.
ಕ್ಷಣಾರ್ಧದಲ್ಲಿ ತಿರುಗೇಟು
ದರೋಡೆಕೋರ ಹಣದ ಡ್ರಾಯರ್ ತೆರೆಯಲು ಪ್ರಯತ್ನಿಸಿದ ಕೂಡಲೇ ಎಚ್ಚೆತ್ತ ಸೋನಿ ವರ್ಮಾ, ಕಿಂಚಿತ್ತೂ ಭಯಪಡದೆ ಆತನ ಮೇಲೆರಗಿದ್ದಾರೆ. ಕಳ್ಳನ ತಲೆಯನ್ನು ಹಿಡಿದು ಆತನನ್ನು ತಳ್ಳಲು ಪ್ರಯತ್ನಿಸಿದಾಗ ಇಬ್ಬರ ನಡುವೆ ಸುಮಾರು ಐದರಿಂದ ಏಳು ಸೆಕೆಂಡುಗಳ ಕಾಲ ತೀವ್ರ ಜಟಾಪಟಿ ನಡೆದಿದೆ. ಯುವತಿಯ ಈ ಅನಿರೀಕ್ಷಿತ ತಿರುಗೇಟಿನಿಂದ ಹೌಹಾರಿದ ದರೋಡೆಕೋರ, ತನ್ನ ಕೈಲಿದ್ದ ಮಚ್ಚನ್ನು ಅಲ್ಲೇ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಅಂಗಡಿಯಿಂದ ಹೊರಕ್ಕೆ ಓಡಿದ್ದಾನೆ.
ಬರಿಗೈಲಿ ಪರಾರಿಯಾದ ಕಳ್ಳ
ಕಳ್ಳ ಓಡುತ್ತಿದ್ದಂತೆಯೇ ಸೋನಿ ವರ್ಮಾ ಕೂಡ ಆತನನ್ನು ಬೆನ್ನಟ್ಟಿಕೊಂಡು ಹೋಗಿ ಜೋರಾಗಿ ಕೂಗಿಕೊಂಡಿದ್ದಾರೆ. ಯುವತಿಯ ಧೈರ್ಯದಿಂದಾಗಿ ದರೋಡೆಕೋರ ಒಂದು ರೂಪಾಯಿಯನ್ನೂ ಕದಿಯಲಾಗದೆ ಬರಿಗೈಲಿ ಪರಾರಿಯಾಗಿದ್ದಾನೆ. ಸದ್ಯ ಲಾಡೋವಾಲ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ಕೇವಲ ಕೆಲವೇ ಸೆಕೆಂಡುಗಳಲ್ಲಿ ಸೋನಿ ತೋರಿದ ಧೈರ್ಯ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ದೊಡ್ಡ ಮಟ್ಟದ ದರೋಡೆಯನ್ನು ತಪ್ಪಿಸಿದ ಈಕೆಯ ಸಾಹಸಕ್ಕೆ ಪೊಲೀಸರು ಕೂಡ ಶಹಬ್ಬಾಸ್ ಎಂದಿದ್ದಾರೆ.

