ಬೆಂಗಳೂರು ನಗರವನ್ನು ಸುತ್ತಮುತ್ತಲ ನಗರದಿಂದ ಸಂಪರ್ಕಿಸಲು ನಮ್ಮ ಮೆಟ್ರೋ, ಸಬ್ ಅರ್ಬನ್ ರೈಲು ಯೋಜನೆ ಕುರಿತು ಪ್ರಸ್ತಾವನೆ, ಕಾಮಗಾರಿಗಳು ನಡೆಯುತ್ತಿವೆ. ಬಸ್, ಖಾಸಗಿ ವಾಹನ ಸೇರಿ ಹಲವು ಮಾದರಿಯ ಸಂಚಾರ ವ್ಯವಸ್ಥೆ ಮೂಲಕ ಜನರು ಬೆಂಗಳೂರು ನಗರಕ್ಕೆ ಆಗಮಿಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ‘ನಮೋ ಭಾರತ್ ರೈಲು’ ಕುರಿತು ಚರ್ಚೆಗಳು ಆರಂಭವಾಗಿದೆ. ಈ ಕುರಿತು ಸಂಸತ್ನಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಮಾತನಾಡಿ, ಕೇಂದ್ರ ರೈಲ್ವೆ ಸಚಿವರ ಗಮನ ಸೆಳೆದಿದ್ದಾರೆ.
ಬೆಂಗಳೂರು ನಗರಕ್ಕೆ ಆರ್ಆರ್ಟಿಎಸ್ ವ್ಯವಸ್ಥೆ ರೈಲುಗಳು ಬೇಕು ಎಂದು ಸಂಸತ್ನಲ್ಲಿ ಮಾತನಾಡಿದ್ದಾರೆ. ರೀಜನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಆರ್ಆರ್ಟಿಎಸ್) ವ್ಯವಸ್ಥೆಯ ರೈಲುಗಳಿಗೆ ‘ನಮೋ ಭಾರತ್’ ರೈಲು ಎಂದು ಕೇಂದ್ರ ಸರ್ಕಾರ ಮರು ನಾಮಕರಣ ಮಾಡಿದೆ.
ನಮೋ ಭಾರತ್ ರೈಲು: ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿಗೆ ಆರ್ಆರ್ಟಿಸ್ ಕಾರಿಡಾರ್ ಅಗತ್ಯವಾಗಿದೆ. ಇದು ಬೆಂಗಳೂರು ನಗರದ ಸುತ್ತಮುತ್ತಲ ಸಂಪರ್ಕಕ್ಕೆ ಅವಶ್ಯಕವಾಗಿದೆ ಎಂದು ಸಂಸದರು ಹೇಳಿದ್ದಾರೆ.
ಪ್ರಸ್ತುತ ಬೆಂಗಳೂರು ನಗರದಲ್ಲಿ 1.4 ಕೋಟಿ ಜನರು ವಾಸಿಸುತ್ತಿದ್ದಾರೆ. ಪ್ರತಿದಿನ 15-20 ಲಕ್ಷ ಜನರು ಸುತ್ತಮುತ್ತಲ ಪ್ರದೇಶದಿಂದ ನಗರಕ್ಕೆ ಆಗಮಿಸುತ್ತಾರೆ. ಇಂತಹ ನಗರಗಳಲ್ಲಿ ತುಮಕೂರು, ಕೋಲಾರ, ಹೊಸೂರು, ರಾಮನಗರ, ಮಂಡ್ಯ ಸೇರಿವೆ.
ನಗರದ ಜನಸಂಖ್ಯೆ 1.4 ಕೋಟಿ ಮೀರಿ ಹೋಗುತ್ತಿದ್ದು, ಪ್ರತಿದಿನ ನಗರಕ್ಕೆ ಆಗಮಿಸುವ ಜನರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪ್ರತಿದಿನ ಸಂಚಾರ ನಡೆಸುವ ಜನರ ಅನುಕೂಲಕ್ಕಾಗಿ ಆರ್ಆರ್ಟಿಸ್ ಕಾರಿಡಾರ್ ಅಗತ್ಯವಾಗಿದೆ ಎಂದು ಸಂಸದರು ಹೇಳಿದ್ದಾರೆ.
ಬೆಂಗಳೂರು ನಗರದ ಸುತ್ತಮುತ್ತಲ ಪ್ರದೇಶಗಳು ದಟ್ಟಣೆಯ ಹೆದ್ದಾರಿಗಳನ್ನು ಹೊಂದಿವೆ. ಇಲ್ಲಿಂದ ಬೆಂಗಳೂರು ನಗರಕ್ಕೆ ಪ್ರತಿದಿನ ಬರುವ ರೈಲುಗಳಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕವಾಗಿದೆ. ಸಂಚಾರ ದಟ್ಟಣೆ ಕಾರಣ ಜನರು ಪ್ರತಿದಿನ ಒಂದು ಕಡೆಯ ಸಂಚಾರಕ್ಕೆ 2-3 ಗಂಟೆ ವ್ಯಯ ಮಾಡುತ್ತಿದ್ದಾರೆ.
ವಾರ್ಷಿಕ ಭಾರತದ ಜಿಡಿಪಿಗೆ 11 ಲಕ್ಷ ಕೋಟಿ ಕೊಡುಗೆ ನೀಡುವ ಬೆಂಗಳೂರು ನಗರಕ್ಕೆ ಸರಿಯಾದ ಆರ್ಆರ್ಟಿಸ್ ಕಾರಿಡಾರ್ ಇಲ್ಲ, ಈ ಪ್ರಸ್ತಾವನೆಗೆ ಒಪ್ಪಿಗೆಯೂ ಸಿಕ್ಕಿಲ್ಲ. ದೆಹಲಿ-ಮೀರತ್ ಕಾರಿಡಾರ್ ಪ್ರಯಾಣದ ಅವಧಿಯನ್ನು 1 ಗಂಟೆ ಕಡಿಮೆ ಮಾಡಿದೆ. ಈ ಮಾದರಿ ಕಾರಿಡಾರ್ ಅಗತ್ಯವಿದೆ ಎಂದು ಸಂಸದರು ಹೇಳಿದ್ದಾರೆ.
ಆದ್ದರಿಂದ ವಸತಿ ಮತ್ತು ನಗರಾಭಿವೃದ್ಧಿ ಮತ್ತು ರೈಲ್ವೆ ಸಚಿವರಿಗೆ ಬೆಂಗಳೂರು ನಗರಕ್ಕೆ ಆರ್ಆರ್ಟಿಸ್ ಕಾರಿಡಾರ್ ಮಂಜೂರು ಮಾಡುವಂತೆ ಒತ್ತಾಯಿಸುತ್ತೇನೆ ಎಂದು ಸಂಸದರು ಹೇಳಿದ್ದಾರೆ. ಅಲ್ಲದೇ ತುಮಕೂರು, ಹೊಸೂರು, ಕೋಲಾರ, ರಾಮನಗರ ಮತ್ತು ಮಂಡ್ಯದಿಂದ ಆರ್ಆರ್ಟಿಸ್ ಕಾರಿಡಾರ್ ನಿರ್ಮಾಣಕ್ಕೆ ಕಾರ್ಯ ಸಾಧ್ಯತಾ ವರದಿ ಮತ್ತು ಡಿಪಿಆರ್ ತಯಾರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂಸದರು ಆರ್ಆರ್ಟಿಸ್ ಕಾರಿಡಾರ್ ಅನ್ನು ಮೆಟ್ರೋ, ಉಪನಗರ ರೈಲು ಮತ್ತು ಎಸ್ಟಿಆರ್ಆರ್ನೊಂದಿಗೆ ಸಂಯೋಜಿಸಬೇಕು ಹಾಗೂ ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ ಅಡಿಯಲ್ಲಿ ಕೇಂದ್ರದ ನೆರವು ಒದಗಿಸಬೇಕು. ಇತರ ನಗರ ಪ್ರದೇಶಗಳಂತೆಯೇ ಬೆಂಗಳೂರಿಗೂ ಆದ್ಯತೆ ಸಿಗಬೇಕು ಎಂದು ಮನವಿ ಮಾಡಿದ್ದಾರೆ.
ಕರ್ನಾಟಕ ಸರ್ಕಾರ ಬೆಂಗಳೂರು ನಗರದ ನಮ್ಮ ಮೆಟ್ರೋ ಜಾಲವನ್ನು ತುಮಕೂರು ತನಕ ವಿಸ್ತರಣೆ ಮಾಡುವ ಪ್ರಸ್ತಾವನೆ ಸಿದ್ಧಗೊಳಿಸಿದೆ. ಈ ಕುರಿತು ಕಾರ್ಯ ಸಾಧ್ಯತಾ ವರದಿ ತಯಾರಾಗಿದ್ದು, ಡಿಪಿಆರ್ ತಯಾರು ಮಾಡಲು ಟೆಂಡರ್ ಅಂತಿಮಗೊಳಿಸಲಾಗಿದೆ.
ಸುಮಾರು 59 ಕಿ.ಮೀ.ಗಳ 27 ನಿಲ್ದಾಣಗಳನ್ನು ಹೊಂದಿರುವ ಯೋಜನೆ ಇದಾಗಿದೆ. ಈಗಾಗಲೇ ತುಮಕೂರು ರಸ್ತೆಯಲ್ಲಿ ಮಾದಾವರ ತನಕ ನಮ್ಮ ಮೆಟ್ರೋ ಸಂಚಾರ ನಡೆಸುತ್ತದೆ. ಇದನ್ನು ನೆಲಮಂಗಲ, ದಾಬಸ್ ಪೇಟೆ, ಕ್ಯಾತ್ಸಂದ್ರ ಮೂಲಕ ತುಮಕೂರು ನಗರಕ್ಕೆ ಸಂಪರ್ಕಿಸುವುದು ಪ್ರಸ್ತಾವಿತ ಯೋಜನೆಯಾಗಿದೆ.
ಆದರೆ ವಿರೋಧ ಪಕ್ಷಗಳು ಈ ಪ್ರಸ್ತಾವಿತ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಇದರ ಬದಲು ಕಡಿಮೆ ವೆಚ್ಚದ ಸಬ್ ಅರ್ಬನ್ ರೈಲು ಯೋಜನೆ ಜಾರಿಗೊಳಿಸಬೇಕು ಇಲ್ಲವೇ ಆರ್ಆರ್ಟಿಸ್ ಕಾರಿಡಾರ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿವೆ.

