ಬೆಂಗಳೂರು: ಅನೈತಿಕ ಸಂಬಂಧ ಮುಂದುವರಿಸುವುದು ಬೇಡ ಎಂದ ಯುವಕನ ಮೇಲೆಯೇ ಮಹಿಳೆ ಗ್ಯಾಂಗ್ ಕಟ್ಟಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಪುಟ್ಟಯ್ಯನ ಅಗ್ರಹಾರದಲ್ಲಿ ಈ ಘಟನೆ ನಡೆದಿದೆ. ಕಾರ್ತಿಕ್ ಹಲ್ಲೆಗೊಳಗಾದ ಯುವಕ. ದೀಪಾ ಹಾಗೂ ಗ್ಯಾಂಗ್ ಹಲ್ಲೆ ನಡೆಸಿರುವ ಆರೋಪಿಗಳು.
ಕಾರ್ತಿಕ್ ಎಂಬ ಯುವಕನಿಗೆ ದೀಪಾ ಎಂಬ ಮಹಿಳೆಯೊಂದಿಗೆ ಅನೈತಿಕ ಸಂಬಂಧವಿತ್ತಂತೆ. ಮನೆಯವರ ಬುದ್ಧಿವಾದದ ಬಳಿಕ ಎಚ್ಚೆತ್ತ ಯುವಕ ತನ್ನ ತಪ್ಪು ತಿದ್ದಿಕೊಳ್ಳಲು ಮುಂದಾಗಿದ್ದಾನೆ. ಮಹಿಳೆಯ ಸಹವಾಸವೇ ಬೇಡ ಎಂದು ನಿರ್ಧರಿಸಿ ಆಕೆಯೊಂದಿಗಿನ ಸಂಪರ್ಕವನ್ನು ಬಿಟ್ಟು ತನ್ನಪಾಡಿಗೆ ತಾನಿರಲು ತೀರ್ಮಾನಿಸಿದ್ದ. ಯುವಕ ಕಾರ್ತಿಕ್ ತನ್ನಿಂದ ದೂರಾಗುತ್ತಿರುವುದನ್ನು ಸಹಿಸದ ಮಹಿಳೆ, ಕಾರ್ತಿಕ್ ಅಂಗಡಿಯೊಂದರ ಬಳಿ ನಿಂತಿದ್ದ ವೇಳೆ ಕಾರಿನಲ್ಲಿ ಗ್ಯಾಂಗ್ ಕಟ್ಟಿಕೊಂಡು ಬಂದ ದೀಪಾ, ಲಾಂಗ್ ಹಾಗೂ ಮಚ್ಚುಗಳಿಂದ ದಾಳಿ ನಡೆಸಿದ್ದಾಳೆ. ಈ ವೇಳೆ ಸಾರ್ವಜನಿಕರು ಗ್ಯಾಂಗ್ ವಿರುದ್ಧ ತಿರುಗಿಬಿದ್ದು ಗಲಾಟೆ ಮಾಡಿದ್ದಾರೆ. ಈ ವೇಳೆ ಗ್ಯಾಂಗ್ ಎಸ್ಕೇಪ್ ಆಗಿದೆ.
ಹಲ್ಲೆಗೊಳಗಾದ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆರೋಪಿ ದೀಪಾ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

