ಸೈಬರ್ ಅಪರಾಧಿಗಳ ‘ಡಿಜಿಟಲ್ ಅರೆಸ್ಟ್’ ಎಂಬ ಹೊಸ ಮಾದರಿಯ ವಂಚನೆಗೆ ಈಗ ಉನ್ನತ ಹುದ್ದೆಯಲ್ಲಿದ್ದ ನಿವೃತ್ತ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಹೈದರಾಬಾದ್‌ನ ಎಸಿ ಗಾರ್ಡ್ಸ್ ನಿವಾಸಿಯಾದ 77 ವರ್ಷದ ನಿವೃತ್ತ ಚೀಫ್ ಪೋಸ್ಟ್‌ಮಾಸ್ಟರ್ ಜನರಲ್ ಅವರು ಬರೋಬ್ಬರಿ 22 ಲಕ್ಷ ರೂಪಾಯಿ ಕಳೆದುಕೊಂಡು ಪೊಲೀಸರ ಮೊರೆ ಹೋಗಿದ್ದಾರೆ.
ವಂಚನೆ ನಡೆದಿದ್ದು ಹೇಗೆ? ಡಿಸೆಂಬರ್ 7 ರಂದು ಸಂತ್ರಸ್ತರಿಗೆ ಕರೆ ಮಾಡಿದ ಮಹಿಳೆಯೊಬ್ಬಳು, ತಾನು ಕೇಂದ್ರ ಸಂವಹನ ಸಚಿವಾಲಯದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾಳೆ. ನಿಮ್ಮ ಹೆಸರಿನಲ್ಲಿ ದೆಹಲಿಯಲ್ಲಿ ಸಿಮ್ ಕಾರ್ಡ್ ಪಡೆಯಲಾಗಿದ್ದು, ಅದನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಲಾಗಿದೆ. ಈ ಸಂಬಂಧ ನಿಮ್ಮ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದು ಬೆದರಿಸಿದ್ದಾಳೆ. ಸಂತ್ರಸ್ತರು ಆ ಸಮಯದಲ್ಲಿ ತಿರುವನಂತಪುರದಲ್ಲಿದ್ದರು.
ದೆಹಲಿಗೆ ಬರಲು ಸಾಧ್ಯವಿಲ್ಲ ಎಂದಾಗ, ವಂಚಕರು ಅವರನ್ನು ಗೂಗಲ್ ಮೀಟ್ ವಿಡಿಯೋ ಕರೆಗೆ ಸಂಪರ್ಕಿಸಿದ್ದಾರೆ. ಅಲ್ಲಿ ಪೊಲೀಸ್ ಸಮವಸ್ತ್ರದಲ್ಲಿದ್ದ ವ್ಯಕ್ತಿಯೊಬ್ಬ ತಾನು ದೆಹಲಿ ಇನ್ಸ್‌ಪೆಕ್ಟರ್ ವಿಜಯ್ ಕುಮಾರ್ ಎಂದು ಹೇಳಿಕೊಂಡಿದ್ದಾನೆ. ನಂತರ ಸಿಬಿಐ ಅಧಿಕಾರಿ ಸೋಗಿನಲ್ಲಿ ಮತ್ತೊಬ್ಬ ವ್ಯಕ್ತಿ ಕಾಣಿಸಿಕೊಂಡು, ಈ ಪ್ರಕರಣ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದು ಎಂದು ಭಯ ಹುಟ್ಟಿಸಿದ್ದಾನೆ.
ಒಂಟಿಯಾಗಿಸಿ ಹಣ ಪೀಕಿದ ಜಾಲ ತನಿಖೆ ಮುಗಿಯುವವರೆಗೆ ಯಾರನ್ನೂ ಸಂಪರ್ಕಿಸಬಾರದು ಮತ್ತು ಮನೆಯಲ್ಲೇ ‘ಡಿಜಿಟಲ್ ಅರೆಸ್ಟ್’ ಆಗಿರಬೇಕು ಎಂದು ವಂಚಕರು ಆದೇಶಿಸಿದ್ದಾರೆ. ಅಲ್ಲದೆ ಹೊಸ ಫೋನ್‌ನಲ್ಲಿ ಸಿಗ್ನಲ್ ಮತ್ತು ವಾಟ್ಸಾಪ್ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿಸಿ, ಪ್ರತಿ ಗಂಟೆಗೊಮ್ಮೆ ವರದಿ ನೀಡುವಂತೆ ಸೂಚಿಸಿದ್ದಾರೆ. ಹೆದರಿದ ನಿವೃತ್ತ ಅಧಿಕಾರಿ ಅವರು ಹೇಳಿದಂತೆಯೇ ತಮ್ಮ ಪೆನ್ಷನ್ ಖಾತೆಯಿಂದ 15 ಲಕ್ಷ ಮತ್ತು ಉಳಿತಾಯ ಖಾತೆಯಿಂದ 7 ಲಕ್ಷ ಸೇರಿದಂತೆ ಒಟ್ಟು 22 ಲಕ್ಷ ರೂಪಾಯಿಯನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯಾದ ನಂತರ ಈ ವಿಷಯ ಯಾರಿಗೂ ತಿಳಿಸದಂತೆ ಬೆದರಿಸಲಾಗಿತ್ತು. ಡಿಸೆಂಬರ್ 19ರಂದು ಆನ್‌ಲೈನ್‌ನಲ್ಲಿ ಇದೇ ರೀತಿಯ ವಂಚನೆಗಳ ಬಗ್ಗೆ ಓದಿದಾಗ ತಾನು ಮೋಸ ಹೋಗಿರುವುದು ಅವರಿಗೆ ಅರಿವಿಗೆ ಬಂದಿದೆ.
‘ಘೋಸ್ಟ್ ಪೇರಿಂಗ್’ ಸ್ಕ್ಯಾಮ್ ಬಗ್ಗೆ ಪೊಲೀಸರ ಎಚ್ಚರಿಕೆ ಈ ನಡುವೆ ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನರ್ ಅವರು ವಾಟ್ಸಾಪ್‌ನ ಹೊಸ ‘ಘೋಸ್ಟ್ ಪೇರಿಂಗ್’ (Ghost Pairing) ವಂಚನೆಯ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. “ನೋಡು ನಿನ್ನ ಫೋಟೋ ಸಿಕ್ಕಿತು” ಎಂಬಂತಹ ಆಕರ್ಷಕ ಲಿಂಕ್‌ಗಳನ್ನು ಕಳುಹಿಸಿ, ಬಳಕೆದಾರರು ಅದರ ಮೇಲೆ ಕ್ಲಿಕ್ ಮಾಡಿದರೆ ಓಟಿಪಿ ಇಲ್ಲದೆಯೇ ಅವರ ವಾಟ್ಸಾಪ್ ಖಾತೆಯನ್ನು ಹ್ಯಾಕರ್‌ಗಳು ತಮ್ಮ ಸುಪರ್ದಿಗೆ ಪಡೆಯುತ್ತಾರೆ. ಒಮ್ಮೆ ಲಿಂಕ್ ಕ್ಲಿಕ್ ಮಾಡಿದರೆ ನಿಮ್ಮ ಖಾಸಗಿ ಚಾಟ್, ಫೋಟೋ ಮತ್ತು ಕಾಂಟ್ಯಾಕ್ಟ್‌ಗಳು ಅವರ ಕೈ ಸೇರುತ್ತವೆ. ಅಪರಿಚಿತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಎಂದು ಅವರು ಎಚ್ಚರಿಸಿದ್ದಾರೆ.

