ಜೂನ್ನಲ್ಲಿ ಜಾರ್ಖಂಡ್ನ ರಾಮ್ಗಢ ಜಿಲ್ಲೆಯಲ್ಲಿ ಸೆಲ್ಫಿ ವ್ಯಾಮೋಹವು ಭೀಕರ ದುರಂತಕ್ಕೆ ಕಾರಣವಾಗಿದೆ. ಕಾಡಾನೆಗಳ ಹಿಂಡಿನ ಸಮೀಪಕ್ಕೆ ಹೋಗಿ ವಿಡಿಯೋ ಮತ್ತು ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ 32 ವರ್ಷದ ಯುವಕನೊಬ್ಬ ಆನೆಗಳ ತುಳಿತಕ್ಕೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾನೆ. ರಾಮ್ಗಢ ಜಿಲ್ಲೆಯ ಮಾಂಡು ಬ್ಲಾಕ್ ವ್ಯಾಪ್ತಿಯ ಅರಾ ದಕ್ಷಿಣ ಎಂಬಲ್ಲಿ ಈ ಘಟನೆ ನಡೆದಿದೆ.
ನಡೆದಿದ್ದೇನು?
ಮೃತರನ್ನು ಕೆಡ್ಲಾ ಗ್ರಾಮದ ನಿವಾಸಿ ಅಮಿತ್ ಕುಮಾರ್ ರಾಜ್ವರ್ ಎಂದು ಗುರುತಿಸಲಾಗಿದೆ. ಅಮಿತ್ ಸುಮಾರು ಎಂಟು ಕಾಡಾನೆಗಳಿದ್ದ ಹಿಂಡಿನ ಹತ್ತಿರಕ್ಕೆ ಹೋಗಿ ಫೋಟೋ ತೆಗೆಯಲು ಮುಂದಾಗಿದ್ದನು. ಈ ವೇಳೆ ಆನೆಗಳು ಆತನ ಮೇಲೆ ದಾಳಿ ನಡೆಸಿ ತುಳಿದಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಕಾಡಾನೆಗಳ ಹತ್ತಿರ ಹೋಗದಂತೆ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ, ಯುವಕ ನಿರ್ಲಕ್ಷ್ಯ ವಹಿಸಿರುವುದು ಸಾವಿಗೆ ಕಾರಣವಾಗಿದೆ ಎಂದು ವಿಭಾಗೀಯ ಅರಣ್ಯ ಅಧಿಕಾರಿ ನಿತೀಶ್ ಕುಮಾರ್ ತಿಳಿಸಿದ್ದಾರೆ. ಸದ್ಯ ಬೊಕಾರೊ ಮತ್ತು ರಾಮ್ಗಢ ಜಿಲ್ಲೆಗಳ ಗಡಿ ಭಾಗದಲ್ಲಿ ಸುಮಾರು 42 ಆನೆಗಳು ಸಂಚರಿಸುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿವೆ.
ಒಡಿಶಾದಲ್ಲೂ ಇಂತಹುದೇ ಘಟನೆ
ಇದೇ ರೀತಿಯ ಮತ್ತೊಂದು ಘಟನೆ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಕರಂಜಿಯಾ ಅರಣ್ಯ ಪ್ರದೇಶದಲ್ಲಿ ವರದಿಯಾಗಿದೆ. ಜಾರ್ಖಂಡ್ನಿಂದ ಒಡಿಶಾಗೆ ವಲಸೆ ಬಂದಿದ್ದ ಆನೆಗಳ ಹಿಂಡನ್ನು ನೋಡಲು ಹೋದ ಯುವಕನೊಬ್ಬ ಆನೆಯ ದಾಳಿಗೆ ಬಲಿಯಾಗಿದ್ದಾನೆ. ಸೋಮವಾರ ತಡರಾತ್ರಿ ಸುಮಾರು 30 ಆನೆಗಳು ನರಸಂಧ್ ಜೋಬಾ ಗ್ರಾಮದ ಮೂಲಕ ಹಾದು ಹೋಗುತ್ತಿದ್ದವು. ಈ ವೇಳೆ ಬಹುತೇಕ ಜನರು ದೂರದಿಂದಲೇ ಆನೆಗಳನ್ನು ವೀಕ್ಷಿಸುತ್ತಿದ್ದರೆ, ಈ ಯುವಕ ಮಾತ್ರ ಆನೆಯ ತೀರಾ ಹತ್ತಿರಕ್ಕೆ ಹೋದ ಪರಿಣಾಮ ಆನೆ ದಾಳಿ ಮಾಡಿದೆ. ಆತನನ್ನು ರಕ್ಷಿಸಲು ಸ್ಥಳೀಯರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

