ಭಾರತೀಯರ ದಿನಚರಿ ಶುರುವಾಗುವುದೇ ಒಂದು ಕಪ್ ಬಿಸಿ ಬಿಸಿ ಚಹಾದಿಂದ. ಆದರೆ, ನಾವು ಅರಿಯದೆ ಮಾಡುವ ಒಂದು ಸಣ್ಣ ತಪ್ಪು ನಮ್ಮ ಆರೋಗ್ಯಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸಬಹುದು ಎಂಬ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸಿದ್ಧಪಡಿಸಿದ ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ.
ಹಾವಿನ ವಿಷಕ್ಕೆ ಹೋಲಿಕೆ ಏಕೆ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಮಾಹಿತಿಯ ಪ್ರಕಾರ, ಚಹಾವನ್ನು ಸಿದ್ಧಪಡಿಸಿದ 15 ರಿಂದ 20 ನಿಮಿಷಗಳಲ್ಲೇ ಕುಡಿಯುವುದು ಉತ್ತಮ. ಇದಾದ ನಂತರ ಅದು ಬ್ಯಾಕ್ಟೀರಿಯಾಗಳ ಆವಾಸಸ್ಥಾನವಾಗಿ ಬದಲಾಗುತ್ತದೆ. ಜಪಾನ್ನಲ್ಲಿ 24 ಗಂಟೆ ಕಳೆದ ಚಹಾವನ್ನು ‘ಹಾವಿನ ವಿಷಕ್ಕಿಂತ ಅಪಾಯಕಾರಿ’ ಎಂದು ಪರಿಗಣಿಸಿದರೆ, ಚೀನಾದಲ್ಲಿ ಇದನ್ನು ವಿಷಕ್ಕೆ ಹೋಲಿಸಲಾಗುತ್ತದೆ. ಇದು ಮುಖ್ಯವಾಗಿ ಮನುಷ್ಯನ ಜೀರ್ಣಾಂಗ ವ್ಯವಸ್ಥೆ ಮತ್ತು ಯಕೃತ್ತಿನ (Liver) ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತಿದೆ.
ಹಾಲು ಬೆರೆಸಿದ ಚಹಾ ಮರುಬಳಕೆ ಎಷ್ಟು ಸುರಕ್ಷಿತ? ಹಾಲು ಬೆರೆಸಿದ ಚಹಾ ಬೇಗನೇ ಕೆಟ್ಟುಹೋಗುವ ಗುಣ ಹೊಂದಿದೆ. ಇದನ್ನು ಸಾಮಾನ್ಯ ತಾಪಮಾನದಲ್ಲಿ ದೀರ್ಘಕಾಲ ಇಟ್ಟರೆ ಅದರಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ವೃದ್ಧಿಯಾಗುತ್ತವೆ. ಅಂತಹ ಚಹಾವನ್ನು ಪದೇ ಪದೇ ಬಿಸಿ ಮಾಡುವುದರಿಂದ ಅದರಲ್ಲಿರುವ ಪೋಷಕಾಂಶಗಳು ನಾಶವಾಗುವುದಲ್ಲದೆ, ಅಸಿಡಿಟಿ, ಉರಿಯೂತ ಮತ್ತು ದೇಹದಲ್ಲಿ ನಿರ್ಜಲೀಕರಣದಂತಹ ಸಮಸ್ಯೆಗಳು ಉಂಟಾಗಬಹುದು. ಚಹಾವನ್ನು ಫ್ರಿಜ್ನಲ್ಲಿಟ್ಟರೂ ಸಹ ಮೂರು ದಿನಗಳಿಗಿಂತ ಹೆಚ್ಚು ಕಾಲ ಬಳಸುವುದು ಸೂಕ್ತವಲ್ಲ.
ಶುಂಠಿ ಚಹಾ ಮತ್ತು ಆಯುರ್ವೇದದ ದೃಷ್ಟಿಕೋನ: ಹಾಲು ಇಲ್ಲದ ಶುಂಠಿ ಚಹಾ ಅಥವಾ ಬ್ಲ್ಯಾಕ್ ಟೀ ತುಲನಾತ್ಮಕವಾಗಿ ಹೆಚ್ಚು ಕಾಲ ಸುರಕ್ಷಿತವಾಗಿರುತ್ತದೆ. ಇದನ್ನು ಸರಿಯಾಗಿ ಶೇಖರಿಸಿಟ್ಟರೆ 3 ರಿಂದ 5 ದಿನಗಳವರೆಗೆ ಬಳಸಬಹುದು. ಆದರೆ ಆಯುರ್ವೇದದ ಪ್ರಕಾರ, ಯಾವುದೇ ಚಹಾ ಆಗಿರಲಿ ಅದನ್ನು ಆಗಲೇ ತಯಾರಿಸಿ ಕುಡಿಯುವುದು ಶ್ರೇಷ್ಠ. ಪದೇ ಪದೇ ಬಿಸಿ ಮಾಡುವುದರಿಂದ ಚಹಾದಲ್ಲಿರುವ ಕಹಿ ಅಂಶ (Tannins) ಹೆಚ್ಚಾಗುತ್ತದೆ, ಇದು ಜೀರ್ಣಾಗ್ನಿಯನ್ನು ಕುಂದಿಸಿ ಹೊಟ್ಟೆಯಲ್ಲಿ ವಿಷಕಾರಿ ಅಂಶಗಳು (Toxins) ಉತ್ಪತ್ತಿಯಾಗಲು ಕಾರಣವಾಗುತ್ತದೆ.
ಸುರಕ್ಷಿತವಾಗಿರಲು ಏನು ಮಾಡಬೇಕು?
- ಪ್ರತಿದಿನ ತಾಜಾ ಚಹಾವನ್ನೇ ತಯಾರಿಸಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.
- ಹಾಲಿನ ಚಹಾವನ್ನು ತಯಾರಿಸಿದ ಎರಡು ಗಂಟೆಯ ಒಳಗಾಗಿ ಕುಡಿಯಿರಿ.
- ಚಹಾ ಬಣ್ಣ ಬದಲಾಗಿದ್ದರೆ ಅಥವಾ ಅದರಲ್ಲಿ ಕೆಟ್ಟ ವಾಸನೆ ಬರುತ್ತಿದ್ದರೆ ತಕ್ಷಣವೇ ಅದನ್ನು ಎಸೆಯಿರಿ.
- ಹರ್ಬಲ್ ಟೀ ಅಥವಾ ಶುಂಠಿ ಚಹಾವನ್ನು ಕೂಡ ಗರಿಷ್ಠ 2-3 ದಿನಗಳಿಗಿಂತ ಹೆಚ್ಚು ಶೇಖರಿಸಿಡಬೇಡಿ.
- ಚಹಾವನ್ನು 2 ರಿಂದ 5 ನಿಮಿಷಗಳಿಗಿಂತ ಹೆಚ್ಚು ಕಾಲ ಕುದಿಸಬೇಡಿ.
ಆರೋಗ್ಯವೇ ಭಾಗ್ಯ ಎಂಬಂತೆ, ನಾಲಿಗೆಯ ರುಚಿಗಿಂತ ದೇಹದ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ. ಹಳೆಯ ಚಹಾವನ್ನು ಬಿಸಿ ಮಾಡಿ ಕುಡಿಯುವ ಬದಲು, ಹೊಸದಾಗಿ ತಯಾರಿಸಿದ ಚಹಾ ಕುಡಿಯುವುದೇ ಕ್ಷೇಮ.

