ಬೆಳಗಾವಿ(ಸುವರ್ಣಸೌಧ): ಗ್ರಾಮೀಣ ಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಕುರಿತು ಹಲವು ದಿನಗಳಿಂದ ಸಮಸ್ಯೆ ಇದೆ. ಇದಕ್ಕೆ ಮೂಲ ಕಾರಣ ವಿವಿಧ ವಲಯಗಳ ಮೂಲಕ ಬರುವ ಅನುದಾನದಲ್ಲಿ ಘಟಕಗಳನ್ನು ನಿರ್ಮಾಣ ಮಾಡಿ ಗ್ರಾಮ ಪಂಚಾಯತಿಗಳಿಗೆ ವಹಿಸುತ್ತಿರುವುದು. ಇದರ ನಿರ್ವಹಣೆಯು ಪಂಚಾಯತಿಗಳಿಗೆ ಹೆಚ್ಚಿನ ಹೊರೆಯಾಗುತ್ತಿದೆ. ಇದನ್ನು ತಪ್ಪಿಸಲು ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸಿ, ಒಂದು ಸ್ಪಷ್ಟವಾದ ಯೋಜನೆಯನ್ನು ಜಾರಿಗೆ ತರುವುದಕ್ಕೆ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನೀರಿನ ಘಟಕಗಳ ನಿರ್ವಹಣೆಗಾಗಿ ಹಲವಾರು ವೆಂಡರ್ಸ್‌ಗಳನ್ನು ನಾನೇ ಖುದ್ದಾಗಿ ಸಂಪರ್ಕಿಸಿದರು ಸಹ ಯಾರೂ ಒಪ್ಪಿಗೆ ನೀಡುತ್ತಿಲ್ಲ. ಅವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಿದ್ಧರಿದ್ದಾರೆ, ಆದರೆ ನಿರ್ವಹಣೆಗೆ ಸಿದ್ಧರಿಲ್ಲ. ಗ್ರಾಮ ಪಂಚಾಯತಿಗಳು ತಮ್ಮ ಅನುದಾನದಲ್ಲಿ ನಿರ್ವಹಿಸುತ್ತಿರುವ ಘಟಕಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ಶೀಘ್ರದಲ್ಲಿಯೇ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಕಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಮ್ಮ ಉದ್ದೇಶ ಗ್ರಾಮೀಣ ಜನರಿಗೆ ಶಾಶ್ವತ ಶುದ್ಧ ನೀರು ಒದಗಿಸುವುದಾಗಿದೆ. ಇದನ್ನು ಪರಿಪೂರ್ಣ ಮಾಡುವುದು ನಮ್ಮ ಸಂಕಲ್ಪವಾಗಿದೆ.
ಪ್ರಶ್ನೆ ಕೇಳುವ ಬಿಜೆಪಿಗರಿಗೆ ಅದಕ್ಕೆ ಉತ್ತರವನ್ನು ಸ್ವೀಕರಿಸುವ ಸಂಯಮವೂ ಅತ್ಯಂತ ಮುಖ್ಯವಾಗಿರುತ್ತದೆ. ನೀರಿನ ಘಟಕಗಳ ನಿರ್ಮಾಣ ಮತ್ತು ನಿರ್ವಹಣೆಗೆ ಶಾಸಕರ ಅನುದಾನವನ್ನು ಬಳಸಬಹುದು. ಅವರು ಕೈಜೋಡಿಸಿದರೆ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಬಿಜೆಪಿ ಶಾಸಕರು ಪ್ರಶ್ನಿಸುವುದಕ್ಕೆ ಸೀಮಿತವಾಗುವ ಬದಲು, ತಮ್ಮ ಹೊಣೆಗಾರಿಕೆಯನ್ನು ಕೂಡ ಪ್ರದರ್ಶಿಸಲಿ ಎಂದು ಹೇಳಿದ್ದಾರೆ.

