ನವದೆಹಲಿ: ಗುಟ್ಕಾ, ಪಾನ್ ಮಸಾಲ, ಸಿಗರೇಟ್, ಜರ್ದಾ ಸೇರಿದಂತೆ ಅನಾರೋಗ್ಯಕರ ಸರಕುಗಳ ಪಟ್ಟಿಗೆ ಸೇರಿಸಲಾದ ತಂಬಾಕು ಉತ್ಪನ್ನಗಳ ಮೇಲಿನ ಗರಿಷ್ಠ ತೆರಿಗೆ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ಕೇಂದ್ರ ಅಬಕಾರಿ ತಿದ್ದುಪಡಿ ವಿಧೇಯಕ 2025, ಆರೋಗ್ಯ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧೇಯಕ 2025 ಮಂಡಿಸಲಾಗಿದೆ. ಸಂಸತ್ ಚಳಿಗಾಲದ ಅಧಿವೇಶನದ ಮೊದಲ ದಿನ ಲೋಕಸಭೆಯಲ್ಲಿ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತಾಗಿ ಚರ್ಚೆಗೆ ಒತ್ತಾಯಿಸಿ ವಿಪಕ್ಷಗಳು ಧರಣಿ ನಡೆಸಿವೆ. ಇದರ ನಡುವೆಯೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಅಬಕಾರಿ ತಿದ್ದುಪಡಿ ವಿಧೇಯಕ 2025, ಆರೋಗ್ಯ ಭದ್ರತೆ ಹಾಗೂ ರಾಷ್ಟ್ರೀಯ ಭದ್ರತಾ ಸೆಸ್ ವಿಧೇಯಕ 2025 ಮಂಡಿಸಿದ್ದಾರೆ.
ತಂಬಾಕು ಉತ್ಪನ್ನಗಳ ಮೇಲೆ ಜಿಎಸ್‌ಟಿ ಸೆಸ್ ಬದಲು ಹೊಸದಾಗಿ ಅಬಕಾರಿ ಸುಂಕ ವಿಧಿಸುವುದು ಇದರ ಉದ್ದೇಶವಾಗಿದೆ. ಸದ್ಯ ಜಾರಿಯಲ್ಲಿರುವ ಜಿಎಸ್‌ಟಿ ಪರಿಹಾರ ಮಾರ್ಚ್ ಗೆ ಅಂತ್ಯವಾಗಲಿದೆ. ನಂತರ ತೆರಿಗೆ ಮಟ್ಟವನ್ನು ಗರಿಷ್ಠ ಮಟ್ಟದಲ್ಲಿ ಉಳಿಸಿಕೊಳ್ಳಲು ಜಗಿಯುವ ತಂಬಾಕು, ಸಿಗರೇಟ್, ಸಿಗಾರ್, ಪರಿಮಳಯುಕ್ತ ತಂಬಾಕಿನ ಮೇಲೆ ಹೊಸ ಅಬಕಾರಿ ಸುಂಕ ವಿಧಿಸಲು ವಿಧೇಯಕ ಮಂಡಿಸಲಾಗಿದೆ.
ತಂಬಾಕು ಉತ್ಪನ್ನಗಳ ಉತ್ಪಾದನೆಗೆ ರಾಷ್ಟ್ರೀಯ ಆರೋಗ್ಯ ಭದ್ರತೆ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧೇಯ ಅನ್ವಯವಾಗುತ್ತದೆ. ತಂಬಾಕು ಉತ್ಪನ್ನಗಳ ಮೇಲೆ ಸೆಸ್ ವಿಧಿಸಲು ಅವಕಾಶ ಕಲ್ಪಿಸುತ್ತದೆ. ರಾಷ್ಟ್ರೀಯ ಭದ್ರತೆ ಸಾರ್ವಜನಿಕ ಆರೋಗ್ಯ ವೆಚ್ಚಗಳಿಗೆ ಹೆಚ್ಚುವರಿ ತೆರಿಗೆ ಸಂಗ್ರಹಿಸುವುದು ಇದರ ಉದ್ದೇಶವಾಗಿದೆ.
ಸಂಸ್ಕರಿಸದ ತಂಬಾಕು ಉತ್ಪನ್ನಗಳಿಗೆ ಶೇಕಡ 60 ರಿಂದ 70 ಸುಂಕ, ನಿಕೋಟಿನ್, ಇನ್ಹಲೇಷನ್ ಉತ್ಪನ್ನಗಳಿಗೆ ಶೇಕಡ 100ರಷ್ಟು ಸುಂಕ, ಸಿಗಾರ್, ಸಿಗರೇಟ್ ಗಳಿಗೆ 100 ಪೀಸ್ ಗಳಿಗೆ ಉದ್ದದ ಆಧಾರದ ಮೇಲೆ 5000 ದಿಂದ 11000 ರೂ. ವರೆಗೆ ಸುಂಕ ವಿಧಿಸಲಾಗುವುದು ಎಂದು ಹೇಳಲಾಗಿದೆ.
