HomeLatest NewsBIG NEWS: 'ಸಹಕಾರ' ಸಂಘಗಳ ನೇಮಕಾತಿಯಲ್ಲಿ ಸಹಕಾರ ಡಿಪ್ಲೊಮಾ, ಪದವಿ ಪಡೆದವರಿಗೆ ಆದ್ಯತೆ: ಪಠ್ಯದಲ್ಲಿ ಸಹಕಾರ...

BIG NEWS: ‘ಸಹಕಾರ’ ಸಂಘಗಳ ನೇಮಕಾತಿಯಲ್ಲಿ ಸಹಕಾರ ಡಿಪ್ಲೊಮಾ, ಪದವಿ ಪಡೆದವರಿಗೆ ಆದ್ಯತೆ: ಪಠ್ಯದಲ್ಲಿ ಸಹಕಾರ ತತ್ವ ಸೇರ್ಪಡೆ: ಸಿಎಂ ಸಿದ್ದರಾಮಯ್ಯ

ಚಾಮರಾಜನಗರ: ಗ್ರಾಮೀಣ ಭಾರತದ ಆರ್ಥಿಕ ಅಭಿವೃದ್ಧಿಗೆ ಪ್ರತೀ ಗ್ರಾಮದಲ್ಲಿ ಒಂದು ಶಾಲೆ, ಒಂದು ಗ್ರಾಮ ಪಂಚಾಯತಿ, ಒಂದು ಸಹಕಾರ ಸಂಘ ಅತ್ಯಗತ್ಯ ಎನ್ನುವುದು ನೆಹರೂ ಅವರ ದೃಷ್ಟಿಯಾಗಿತ್ತು. ಇವರ ಈ ದೂರದೃಷ್ಟಿಯ ಕಾರಣಕ್ಕೆ ದೇಶದಲ್ಲಿ ಸಹಕಾರ ಚಳವಳಿ ಗಟ್ಟಿಯಾಯಿತು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ಚಾಮರಾಜನಗರದಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ನೆಹರೂ ಅವರ ಈ ದೂರದೃಷ್ಟಿ ಕಾರಣಕ್ಕೆ ಅವರ ಜನ್ಮ ದಿನದಂದೇ ಪ್ರತೀ ವರ್ಷ ಸಹಕಾರ ಸಪ್ತಾಹ ಉದ್ಘಾಟನೆಯಾಗುತ್ತದೆ. ಇಂದು ರಾಜ್ಯದಲ್ಲಿ ಕೃಷಿ, ಹೈನುಗಾರಿಕೆ, ಕೈಗಾರಿಕೆ, ಬ್ಯಾಂಕಿಂಗ್ ಸೇರಿ ಹಲವಾರು ಕ್ಷೇತ್ರಗಳಲ್ಲಿ ಸಹಕಾರಿ ಚಳವಳಿ, ಸಹಕಾರಿ ಸಂಘಗಳು ಬೆಳೆಯುತ್ತಲೇ ಇವೆ. ಇದು ಆರೋಗ್ಯಕಾರಿ ಬೆಳವಣಿಗೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾನು ಪಶು ಸಂಗೋಪನಾ ಸಚಿವನಾಗಿದ್ದಾಗ ಹಾಲು ಉತ್ಪಾದಕರ ಸಹಕಾರ ಸಂಘಗಳ ಸ್ವಾಯತ್ತತೆ ಮತ್ತು ಸ್ವಾವಲಂಬನೆಗೆ ಪೂರ್ಣ ಸಹಕಾರ ನೀಡಿದ್ದೆ. ಈಗ ಒಂದು ದಿನಕ್ಕೆ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ನಾನು ಹಾಲು ಉತ್ಪಾದಕರ ಅನುಕೂಲಕ್ಕಾಗಿ ಲೀಟರ್ ಗೆ 5ರೂ ನಂತೆ ಒಂದು ದಿನಕ್ಕೆ 5 ಕೋಟಿ ರೂಪಾಯಿ ಸಹಾಯ ಧನವನ್ನು ರೈತರಿಗೆ ನಮ್ಮ ಸರ್ಕಾರದಿಂದ ನೀಡಲಾಗುತ್ತಿದೆ. ನಾವು ಎರಡು ಬಾರಿ ಹಾಲಿನ ದರವನ್ನು ಹೆಚ್ಚಿಸಿದರೂ ಆ ಹೆಚ್ಚುವರಿ ಹಣ ಹಾಲು ಉತ್ಪಾದಕರಿಗೇ ಹೋಗಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದೇನೆ ಎಂದರು.

ನಾನು ಮುಖ್ಯಮಂತ್ರಿ ಆದಾಗಿನಿಂದ ಎಲ್ಲಾ ಜಾತಿ, ಎಲ್ಲಾ ಧರ್ಮದ ಜನರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡುತ್ತಿದ್ದೇವೆ‌. ಚಾಮರಾಜನಗರ ಜಿಲ್ಲೆಯ ಎಲ್ಲಾ ಜಾತಿಯ, ಎಲ್ಲಾ ಧರ್ಮದವರೂ ನನಗೆ ಸಹಕಾರ ಕೊಟ್ಟಿದ್ದಾರೆ. ಹೀಗಾಗಿ ಚಾಮರಾಜನಗರ ಜಿಲ್ಲೆಯನ್ನು ನಾನು ಯಾವತ್ತೂ ಮರೆಯುವುದಿಲ್ಲ. ಚಾಮರಾಜನಗರಕ್ಕೆ ಅನೇಕ ಸಾರಿ ಬಂದಿದ್ದೀನಿ. ಈ ಜಿಲ್ಲೆಗೆ ಬಂದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಅನ್ನೋ ಮೌಢ್ಯ ಪ್ರಚಲಿತದಲ್ಲಿ ಇದೆ. ಆದರೆ ಇಲ್ಲಿಗೆ ಬಂದು ಹೋದಷ್ಟೂ ನನ್ನ ಸ್ಥಾನ ಮಾತ್ರವಲ್ಲ, ನಮ್ಮ ಪಕ್ಷದ ಅಧಿಕಾರವೂ ಮತ್ತೆ ಮತ್ತೆ ಗಟ್ಟಿ ಆಗಿದೆ ಎಂದರು.

ನಾನು ಜೆಡಿಎಸ್ ನಲ್ಲೇ ಇದ್ದಿದ್ದರೆ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ದೇವೇಗೌಡರು ಮತ್ತು ಅವರ ಮಕ್ಕಳು ನನ್ನನ್ನು ಮುಖ್ಯಮಂತ್ರಿ ಮಾಡಲು ಬಿಡುತ್ತಿರಲಿಲ್ಲ. ಸಹಕಾರಿ ಚಳವಳಿಯಲ್ಲಿದ್ದ ಜಿ.ಟಿ.ದೇವೇಗೌಡರು ಈಗಲೂ ಜೆಡಿಎಸ್ ನಲ್ಲಿ ಇದ್ದಾರೆ. ಆದರೆ ನನ್ನ ಪರವಾಗಿಯೇ ಇದ್ದಾರೆ. ಜಿ.ಟಿ.ದೇವೇಗೌಡರು 2006ರ ವರೆಗೂ ನನ್ನ ಜೊತೆಗೇ ಇದ್ದರು‌. ಜೆಡಿಎಸ್ ನಿಂದ ನನ್ನನ್ನು ಉಚ್ಚಾಟಿಸಿದ ಮೇಲೆ ಜಿ.ಟಿ.ದೇವೇಗೌಡರು ಅಲ್ಲೇ ಉಳಿದು ಬಿಟ್ಟರು. ಈಗ ಮತ್ತೆ ಒಂದು ರೀತಿಯಲ್ಲಿ ನಮ್ಮ ಜೊತೆಗೇ ಇದ್ದಾರೆ ಎಂದರು.

ಸಹಕಾರ ಸಂಘದ ನೇಮಕಾತಿಗಳಲ್ಲಿ ಸಹಕಾರ ಡಿಪ್ಲೊಮೋ, ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ಪಠ್ಯಗಳಲ್ಲಿ ಸಹಕಾರಿ ತತ್ವದ ಮಹತ್ವವನ್ನು ಅಳವಡಿಸಲಾಗುವುದು. ನಮ್ಮ ಸರ್ಕಾರ ಸಹಕಾರ ರಂಗದ ಬೆಳೆವಣಿಗೆಗೆ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಸಚಿವರಾದ ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಸಂಸದರಾದ ಸುನೀಲ್ ಬೋಸ್, ಶಾಸಕರಾದ ಕೆ.ಎನ್.ರಾಜಣ್ಣ, ಪುಟ್ಟರಂಗ ಶೆಟ್ಟಿ, ಜಿ.ಟಿ.ದೇವೇಗೌಡರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಸಹಕಾರಿ ರಂಗದ ಧುರೀಣರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular