ಮಂಗಳೂರು: ಕಾರ್ ನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಆರೋಪಿಯ ಮನೆ ಜಪ್ತಿ ಮಾಡಲಾಗಿದೆ.
ಜಾನುವಾರು ಸಾಗಿಸುತ್ತಿದ್ದ ವೇಳೆ ಬಂಧಿತರಾಗಿದ್ದ ಇಬ್ಬರು ಆರೋಪಿಗಳ ಪೈಕಿ ಓರ್ವನ ಮನೆಯನ್ನು ಧರ್ಮಸ್ಥಳ ಠಾಣೆ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನವೆಂಬರ್ 2ರಂದು ಪಟ್ರಮೆ ಗ್ರಾಮದ ಪಟ್ಟೂರು ರಸ್ತೆಯಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತಿದ್ದ ಉಳ್ಳಾಲ ತಾಲೂಕಿನ ಇಬ್ರಾಹಿಂ ಖಲೀಲ್(38), ಮಹಮದ್ ಸಿನಾನ್(25) ಅವರನ್ನು ಧರ್ಮಸ್ಥಳ ಠಾಣೆ ಪೊಲೀಸರು ಬಂಧಿಸಿದ್ದರು.
ಜಾನುವಾರುಗಳನ್ನು ನೀಡಿದ ಪಟ್ರಮೆ ಗ್ರಾಮದ ಜೊಹರ್ ಸೇರಿದಂತೆ ಮೂವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿದಾಗ ಇಬ್ರಾಹಿಂ ಖಲೀಲ್ ಮನೆಯಲ್ಲಿ ಮಾಂಸಕ್ಕಾಗಿ ಜಾನುವಾರು ಕತ್ತರಿಸಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ರಾಹಿಂ ಖಲೀಲ್ ಮನೆ ಜಪ್ತಿ ಮಾಡಲಾಗಿದೆ.
