ಕಳೆದ 7 ದಶಕಗಳಿಂದ ಅಡಕೆ ಬಗ್ಗೆ ಒಂದಲ್ಲ ಒಂದು ತಗಾದೆ ತೆಗೆಯುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ(WHO) ಕ್ಯಾನ್ಸರ್ ಕಾರಕ ನೆಪದಲ್ಲಿ ಅಡಕೆ ನಿಷೇಧಿಸಲು ಕರೆ ನೀಡಿದೆ.
ಶ್ರೀಲಂಕಾದಲ್ಲಿ ನಡೆದ ಆಗ್ನೇಯ ಒಕ್ಕೂಟದೊಂದಿಗಿನ ವಿಶ್ವ ಆರೋಗ್ಯ ಸಂಸ್ಥೆಯ ಸಮಾವೇಶದಲ್ಲಿ ಅಡಿಕೆಯ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಸಮಾವೇಶ ಅಕ್ಟೋಬರ್ 16ರಂದು ಮುಕ್ತಾಯಗೊಂಡಿದೆ.
ಭಾರತ, ಬಾಂಗ್ಲಾ, ಭೂತಾನ್, ಉತ್ತರ ಕೊರಿಯಾ, ಮಾಲ್ಡೀವ್ಸ್, ಮಯನ್ಮಾರ್, ನೇಪಾಳ, ಶ್ರೀಲಂಕಾ, ಥೈಲ್ಯಾಂಡ್ ಮೊದಲಾದ ರಾಷ್ಟ್ರಗಳು ಸಮಾವೇಶದಲ್ಲಿ ಭಾಗವಹಿಸಿದ್ದವು. ಕ್ಯಾನ್ಸರ್ ಕಾರಕ ವಸ್ತುಗಳ ವಿಚಾರದಲ್ಲಿ ಸಮಾವೇಶದಲ್ಲಿ ಚರ್ಚೆ ನಡೆಸಲಾಗಿದೆ.
ಒಕ್ಕೂಟದ ಎಲ್ಲಾ ದೇಶಗಳಲ್ಲಿ ಒಟ್ಟಾಗಿ 28 ಕೋಟಿ ವಯಸ್ಕರು, 1.1 ಕೋಟಿ ಅಪ್ರಾಪ್ತರು ಹೊಗೆರಹಿತ ತಂಬಾಕು, ನಿಕೋಟಿನ್ ಮತ್ತಿತರ ವ್ಯಸನಿಗಳಿದ್ದಾರೆ, ಇದು ಕ್ಯಾನ್ಸರ್ ಮತ್ತು ಕಾರಣವಾಗಿದ್ದು ಇವುಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಈ ಉತ್ಪನ್ನಗಳ ಸಾಲಿನಲ್ಲಿ ಅಡಕೆಯನ್ನು ಕೂಡ ಸೇರಿಸಲಾಗಿದೆ.
ಹೊಗೆರಹಿತ ತಂಬಾಕು, ನಿಕೋಟಿನ್, ಅಡಿಕೆ ಉತ್ಪಾದನೆ ಹಾಗೂ ಮಾರಾಟ ಇತ್ಯಾದಿಗಳ ಮೇಲೆ ನಿಯಂತ್ರಣಕ್ಕೆ ಚೌಕಟ್ಟು, ರಾಷ್ಟ್ರೀಯ ಶಾಸನ ತರಬೇಕು. ಉತ್ಪಾದನೆ, ಮಾರಾಟ, ಜಾಹೀರಾತು, ಪ್ರಚಾರ, ಪ್ರಾಯೋಜಕತ್ವ ನಿಷೇಧಕ್ಕಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸೂಚಿಸಲಾಗಿದೆ. ಅಡಿಕೆ ಸಹಿತ ಎಲ್ಲಾ ಉತ್ಪನ್ನಗಳನ್ನು ನಿಷೇಧಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಕರೆ ನೀಡಿದೆ.