ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಸಹಾಯಕರು ಸೇವೆಯಿಂದ ನಿವೃತ್ತರಾದಾಗ ಅಥವಾ ಸೇವೆಯಲ್ಲಿರುವಾಗಲೇ ಮೃತಪಟ್ಟಲ್ಲಿ 5 ಲಕ್ಷ ರೂ. ಇಡುಗಂಟು ನೀಡುವ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 10,450 ಗ್ರಾಮ ಸಹಾಯಕರ ಸೇವೆಯನ್ನು ಗ್ರೂಪ್ ಡಿ ಹುದ್ದೆಯಲ್ಲಿ ಸಕ್ರಮಗೊಳಿಸುವ ಇಲ್ಲವೇ ಸದ್ಯ ನೀಡುತ್ತಿರುವ ಗೌರವ ಧನವನ್ನು 15 ಸಾವಿರ ರೂ.ನಿಂದ 27 ಸಾವಿರ ರೂಪಾಯಿಗೆ ಹೆಚ್ಚಿಸುವ ಪ್ರಸ್ತಾಪ ಕೂಡ ಸರ್ಕಾರದ ಮುಂದಿದೆ.
ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 10450 ಗ್ರಾಮ ಸಹಾಯಕರು ನಿವೃತ್ತರಾದಾಗ ಇಲ್ಲವೇ ಸೇವೆಯಲ್ಲಿರುವಾಗಲೇ ಮೃತಪಟ್ಟಲ್ಲಿ 5 ಲಕ್ಷ ರೂ. ಇಡುಗಂಟು ನೀಡಲು ತೀರ್ಮಾನಿಸಲಾಗಿದೆ ಎಂದು ಸಂಪುಟ ಸಭೆಯ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.