ಬೆಂಗಳೂರು: ಸಾರ್ವತ್ರಿಕ ವರ್ಗಾವಣೆಯಲ್ಲಿ ವರ್ಗಾವಣೆಗೊಂಡಿರುವ ಬೋಧಕೇತರ ನೌಕರರನ್ನು ಕಛೇರಿ ಕರ್ತವ್ಯದಿಂದ ಬಿಡುಗಡೆಗೊಳಿಸುವ ಕುರಿತು ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ ಸೂಚನೆ ನೀಡಲಾಗಿದೆ.
ಉಲ್ಲೇಖಿತ-01ರ ಸರ್ಕಾರದ ಮಾರ್ಗಸೂಚಿಯನ್ವಯ ಉಲ್ಲೇಖ-02 ರಂತೆ ದಿನಾಂಕ:30-05-2025 ಮತ್ತು ದಿನಾಂಕ:25-06-2025ರಂದು ಅಧಿಸೂಚನೆ ಹೊರಡಿಸಿ ಉಲ್ಲೇಖಿತ-02 ಮತ್ತು 03ರ ವಿವಿಧ ದಿನಾಂಕಗಳಂದು ಕೌನ್ಸಿಲಿಂಗ್ ಮೂಲಕ ಹಾಗೂ ಒಂದೇ ಕಛೇರಿಯ ದೀರ್ಘ ನಿಲುಗಡೆಯನ್ನು ಪರಿಗಣಿಸಿ ಸಾರ್ವತ್ರಿಕ ವರ್ಗಾವಣೆಯನ್ನು ಕೈಗೊಳ್ಳಲಾಗಿದೆ. ಹಾಗೂ ವರ್ಗಾವಣಾ ಆದೇಶಗಳನ್ನು ಜಾರಿಗೊಳಿಸಲಾಗಿದೆ.
ಆದರೆ ಉಲ್ಲೇಖ-04ರಂತೆ ಕಛೇರಿ ಮುಖ್ಯಸ್ಥರುಗಳು ಹಾಗೂ ನೌಕರರುಗಳು ಸಲ್ಲಿಸಿರುವ ಮನವಿಗಳನ್ನು ಪರಿಶೀಲಿಸಿದೆ,
ಈ ಕಛೇರಿಯ ವರ್ಗಾವಣಾ ಆದೇಶಗಳಂತೆ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿಯಿಂದ ಬಿಡುಗಡಗೊಂಡು ವರ್ಗಾವಣೆ ಹೊಂದಿರುವ ಸ್ಥಳಕ್ಕೆ ಕರ್ತವ್ಯಕ್ಕೆ ಹಾಜರಾಗದೇ, ಮೇಲಾಧಿಕಾರಿಗಳ ಕಛೇರಿಗೆ ಅನಗತ್ಯವಾಗಿ ಪತ್ರ ಸಲ್ಲಿಸಿ, ಹಿಂದಿನ ಕಛೇರಿಯಲ್ಲಿ ಮುಂದುವರೆಯುತ್ತಿರುವುದನ್ನು ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ.
ಸಾರ್ವತ್ರಿಕ ವರ್ಗಾವಣೆಯಲ್ಲಿ ವರ್ಗಾವಣೆಗೊಂಡ ನೌಕರರನ್ನು ಮುಂದುವರೆಸಿರುವ ಪ್ರಕರಣವಿದ್ದಲ್ಲಿ ಕೂಡಲೇ ಬಿಡುಗಡೆಗೊಳಿಸುವಂತೆ ಸಂಬಂಧಪಟ್ಟ ಎಲ್ಲಾ ಪ್ರಾಧಿಕಾರಿಗಳಿಗೆ ಈ ಮೂಲಕ ತಿಳಿಸಿದೆ. ಹಾಗೂ ಈ ಬಗ್ಗೆ ತುರ್ತಾಗಿ ಈ ಕಛೇರಿಗೆ ವರದಿ ಸಲ್ಲಿಸುವುದು.
ತಪ್ಪಿದಲ್ಲಿ ಅಂತಹ ಕಛೇರಿ ಮುಖ್ಯಸ್ಥರ ಹಾಗೂ ಅಂತಹ ನೌಕರರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅಂತಿಮವಾಗಿ ತಿಳಿಸಿದೆ.
